Advertisement

ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಭ್ಯಾಸ : HDK

09:47 PM Mar 26, 2021 | Team Udayavani |

ಬೆಂಗಳೂರು: ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಾಭ್ಯಾಸ. ಕಾಂಗ್ರೆಸ್‌ನ ಇಂತಹ ತಪ್ಪುಗಳಿಂದಲೇ ಬಿಜೆಪಿ ಈ ಹಂತಕ್ಕೆ ಬೆಳೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

Advertisement

ಜೆಡಿಎಸ್‌ನ ಆಯ್ಕೆ, ನಿರ್ಧಾರದ ಬಗ್ಗೆ ಕಾಂಗ್ರೆಸ್‌ನ “ಮಹಾನಾಯಕರು’ ಮಾತನಾಡುವುದನ್ನು ನಿಲ್ಲಿಸಿದರೆ ಉತ್ತಮ. ಇಲ್ಲದಿದ್ದರೆ ಜಾತ್ಯಾತೀತವಾದಿ ಮುಖವಾಡ ಧರಿಸಿರುವ ಅವರ ಕೋಮುವಾದಿ ಮುಖ್ಯ ಬಯಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದನ್ನು ಸಮರ್ಥಿಸಿಕೊಂಡಿರುವ ಕುಮಾರಸ್ವಾಮಿ ಅವರು ಶುಕ್ರವಾರ ಸರಣಿ ಟ್ವೀಟ್‌ ಮೂಲಕ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದು, ವಿವರ ಹೀಗಿದೆ.
“ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಹೆಣಗಳು ಬಿದ್ದು, ಅಲ್ಪಸಂಖ್ಯಾತರು ಆತಂಕದಲ್ಲಿದ್ದಾಗ ಕಾಂಗ್ರೆಸ್‌ ನಾಯಕರು ಬಿಲ ಸೇರಿದ್ದರು. ಅಂದು ಮುಸ್ಲಿಮರ ಬೆಂಬಲಕ್ಕೆ ನಿಂತಿದ್ದು ಜೆಡಿಎಸ್‌. ಇಂದು ಬಸವಕಲ್ಯಾಣದಲ್ಲಿ ನಾವು ಮುಸ್ಲಿಂ ಅಭ್ಯರ್ಥಿಯನ್ನು ಹಾಕುತ್ತಲೇ ಕಾಂಗ್ರೆಸ್‌ ತಾನು ಮುಸ್ಲಿಮರ ರಕ್ಷಕ ಎಂದು ಎದೆತಟ್ಟಿಕೊಂಡು ಮುಂದೆ ಬಂದಿದೆ’ ಎಂದು ಲೇವಡಿ ಮಾಡಿದ್ದಾರೆ.

“ನಮ್ಮ ರಾಜ್ಯ, ನೆಲ, ಪಕ್ಷ, ನಮ್ಮ ಅಭ್ಯರ್ಥಿ. ಇದರಲ್ಲಿ ಜೆಡಿಎಸ್‌ ಯಾರ ಅಪ್ಪಣೆಗೆ ಕಾಯಬೇಕು? ಯಾವ ದೊಣ್ಣೆ ನಾಯಕನ ಆಜ್ಞೆ ಆಗಬೇಕು ನಮಗೆ. ಜನರಿಗೆ ಬೇಕಾದ ಅಭ್ಯರ್ಥಿಗಳನ್ನು ನಾವು ಹಾಕುತ್ತೇವೆ. ಅದರಲ್ಲಿ ನಮಗೆ ಧರ್ಮ ನಗಣ್ಯ. ಪ್ರತಿಯೊಂದರಲ್ಲೂ ಹಿಂದೂ-ಮುಸ್ಲಿಂ ಎಂದು ಹುಡುಕುವವರಿಗೆ ಜನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ ;ಸಿಡಿ ಪ್ರಕರಣ : ಡಿಕೆ ಶಿವಕುಮಾರ್ ರಾಜೀನಾಮೆ ಕೊಡುವುದು ಬೇಡ : ರಮೇಶ್ ಜಾರಕಿಹೊಳಿ

“ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಭ್ಯಾಸ. ಅದಕ್ಕಾಗಿಯೇ ಮುಸ್ಲಿಮರನ್ನು ಕಾಂಗ್ರೆಸ್‌ ನಮ್ಮ ಮತ ಎನ್ನುತ್ತದೆ. ನಮ್ಮವರು ಅನ್ನುವುದಿಲ್ಲ. ಕಾಂಗ್ರೆಸ್‌ನ ಇಂಥ ತಪ್ಪುಗಳಿಂದಲೇ ಬಿಜೆಪಿ ಈ ಹಂತಕ್ಕೆ ಬೆಳೆದಿದೆ. ದೇಶದಲ್ಲಿ ಕೋಮು ಭಾವನೆಗಳು ಈ ಮಟ್ಟಕ್ಕೆ ಕೆರಳಿರುವುದರ ಹಿಂದೆ ಕಾಂಗ್ರೆಸ್‌ನ ಪ್ರಮಾದಗಳಿವೆ’ ಎಂದು ಕುಟುಕಿದ್ದಾರೆ.

Advertisement

“ಬಸವಕಲ್ಯಾಣದಲ್ಲಿ ಜೆಡಿಎಸ್‌ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ‘ಮಹಾನ್‌ ನಾಯಕ’ರು ಹೇಳಿದ್ದಾರೆ. ಪ್ರತಿಯೊಂದಕ್ಕೂ ಒಳ ಒಪ್ಪಂದ, ಒಳಸಂಚು ಮಾಡಿದವರಿಗಷ್ಟೇ ಒಳ ಒಪ್ಪಂದದ ಕನವರಿಕೆ. ಆಪರೇಷನ್‌ ಕಮಲದಲ್ಲಿ, ಮೈತ್ರಿ ಸರ್ಕಾರ ಉರುಳಿದ್ದರಲ್ಲಿ ಅಂಥ ಒಳಒಪ್ಪಂದಗಳು ಈಗಾಗಲೇ ಬಯಲಾಗಿವೆ. ಜೆಡಿಎಸ್‌ಗೆ ಇಂಥ ದುಬುìದ್ಧಿ ಇಲ್ಲ’ ಎಂದು ತಿರುಗೇಟು ನೀಡಿದ್ದಾರೆ.

“ನಮ್ಮ ಆಯ್ಕೆ, ನಿರ್ಧಾರಗಳ ಬಗ್ಗೆ ಮಾತನಾಡುವುದನ್ನು ಕಾಂಗ್ರೆಸ್‌ನ ಮಹಾನ್‌ ನಾಯಕರು ನಿಲ್ಲಿಸಿದರೆ ಉತ್ತಮ. ಇಲ್ಲದಿದ್ದರೆ ಜಾತ್ಯಾತೀತವಾದಿ ಮುಖವಾಡ ಧರಿಸಿರುವ ಅವರ ಕೋಮುವಾದಿ ಮುಖವನ್ನು ಬಯಲು ಮಾಡಬೇಕಾಗುತ್ತದೆ. ಶತಮಾನಗಳಿಂದ ವೀರನಾಗಿ ಮಲಗಿದ್ದ ಟಿಪ್ಪು ಸುಲ್ತಾನ್‌ನನ್ನು ದೇಶದ್ರೋಹಿಯನ್ನಾಗಿ ಮಾಡಿದ ಮಹಾನ್‌ ನಾಯಕರು ತೆಪ್ಪಗಿದ್ದರೆ ಸರಿ’ ಎಂದು ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next