Advertisement

ಎಚ್‌ಡಿಕೆ ಅವಧಿಯ ಅಭಿವೃದ್ಧಿ ಸೊನ್ನೆ

12:00 PM Jan 04, 2018 | |

ಮಾಗಡಿ: ಎಲ್ಲಿ ಕುಟುಂಬ ರಾಜಕಾರಣವಿರುತ್ತದೆಯೋ ಅಲ್ಲಿ ಜಾತ್ಯತೀತ ರಾಜಕಾರಣ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ ವಿರುದ್ಧ ವಾಗ್ಧಾಳಿ ನಡೆಸಿದರು. ಪಟ್ಟಣದ ಐತಿಹಾಸಿಕ ನಾಡಪ್ರಭು ಕೆಂಪೇಗೌಡ ಕೋಟೆ ಮೈದಾನದಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

20 ತಿಂಗಳು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರ ಸಾಧನೆ ಕೇವಲ ಗ್ರಾಮವಾಸ್ತವ್ಯ. ಅವರ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ. ಕುಟುಂಬ ರಾಜಕಾರಣದಿಂದ ಬೇಸತ್ತು 7 ಮಂದಿ ಜೆಡಿಎಸ್‌ ಶಾಸಕರು ಬಂಡಾಯವೆದ್ದು, ಹೊರಬಂದಿದ್ದಾರೆ. ಎಚ್‌ಡಿಕೆ ಸಾಧನೆ ಏನೆಂದು ಈ ಬಂಡಾಯ ಶಾಸಕರಿಗೆ ತಿಳಿದಿದೆ ಎಂದರು.

“ಚುನಾವಣೆ ವೇಳೆ ನೀಡಿದ ಮಾತಿನಂತೆ ಕಾಂಗ್ರೆಸ್‌ ಸರ್ಕಾರ ಎಲ್ಲರಿಗೂ ಎಲ್ಲ ಸೌಲಭ್ಯ ಒದಗಿಸಿದೆ. ಅಹಿಂದ ಸೇರಿದಂತೆ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸಿದೆ. ಹಗರಣ ರಹಿತ, ಭ್ರಷ್ಠಾಚಾರ ಮುಕ್ತ ಆಡಳಿತ ನಡೆಸಿದ ಹೆಗ್ಗಳಿಕೆ ನಮ್ಮದು.

ಕಾಂಗ್ರೆಸ್‌ ಆಡಳಿತದ ಭ್ರಷ್ಠಾಚಾರ ಹೊರಗೆಳೆಯುತ್ತೇವೆ ಎನ್ನುತ್ತಿರುವ ವಿರೋಧ ಪಕ್ಷಗಳ ನಾಯಕರ ಬುಟ್ಟಿಯಲ್ಲಿ ಏನೂ ಇಲ್ಲ,’ ಎಂದ ಸಿಎಂ, ಇದೇ ವೇಳೆ ಮಾಗಡಿಗೆ ಹೊಸದಾಗಿ ಪಾಲಿಟೆಕ್ನಿಕ್‌ ಕಾಲೇಜಿಗೆ ಮಂಜೂರಾತಿ ನೀಡಿದರು.

ಇಂಧನ ಸಚಿವ ಮತ್ತು ಜಿಲ್ಲಾ ಉಸ್ತವಾರಿ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, “ಮಾಗಡಿ ಕ್ಷೇತ್ರಕ್ಕೆ ಹೇಮಾವತಿ ನೀರಾವರಿ ಯೋಜನೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ 324 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಈಗಾಗಲೇ ಕಾಮಗಾರಿಗೆ 131 ಕೋಟಿ ರೂ. ವೆಚ್ಚ ಮಾಡಲಾಗಿದೆ.

Advertisement

ಮುಂದಿನ ಒಂದು ವರ್ಷದಲ್ಲಿ ತಾಲೂಕಿನ 86 ಕೆರೆಗಳಿಗೆ ನೀರು ತುಂಬಿಸಲು ನಾವು ಸಂಕಲ್ಪ ಮಾಡಿದ್ದೇವೆ. ಹಾಗೇ 4 ವರ್ಷಗಳ ಬರಗಾಲದ ನಡುವೆಯೂ 7 ಗಂಟೆ ವಿದ್ಯುತ್‌ ಕೊಟ್ಟಿದ್ದೇವೆ. ಪ್ರತಿ 2 ಪಂಪ್‌ಸೆಟ್‌ಗಳಿಗೆ ಉಚಿತ ಟಿಸಿ ಕೊಡಲಾಗುತ್ತಿದೆ. ಸ್ವತಃ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರೇ “ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಟಾಚಾರ ಮಾಡಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

ಈ ಮುಲಕ ವಿರೋಧ ಪಕ್ಷದವರೂ ಮೆಚ್ಚುಕೊಳ್ಳುವಂತಹ ಆಡಳಿತವನ್ನು ಕಾಂಗ್ರೆಸ್‌ ನೀಡಿದೆ,’ ಎಂದ‌ು ಹೇಳಿದರು. ಶಾಸಕ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, “ಶಿಕ್ಷಕರ ಭವನ, ನಿವೃತ್ತ ಸರ್ಕಾರಿ ನೌಕರರ ಭವನ, ಮಹಿಳಾ ಕಾಲೇಜು, ಮರ್ಕೋಂಡಹಳ್ಳಿ ಡ್ಯಾಂನಿಂದ ಶ್ರೀರಂಗ ಏತನೀರಾವರಿ ಯೋಜನೆ,

ಬಿಡದಿಗೆ ಮಂಚನಬೆಲೆಯಿಂದ ಕುಡಿವ ನೀರು, ಕೂಟಗಲ್‌ಗೆ ಕಣ್ವನದಿ ನೀರು, ಕುದೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಡಿಪೋ, ತಿಪ್ಪಸಂದ್ರ, ಕುದೂರಿಗೆ ಕ್ರೀಡಾಂಗಣ ಮಂಜೂರು ಮಾಡುವುದೂ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next