ಬೆಂಗಳೂರು: ಮೈತ್ರಿ ಬಗ್ಗೆ ಬಿಜೆಪಿಯ ಮೀನಾಮೇಷದ ನಡೆಗೆ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ಸರಿಯಾಗಿ ನಮ್ಮನ್ನು ಬಳಕೆ ಮಾಡಿಕೊಳ್ಳಲಿ. ಇಲ್ಲದೆ ಹೋದರೆ ಮುಂದೆ ಪೆಟ್ಟು ಬಿದ್ದರೆ ಅದರ ಸಾಧಕ-ಬಾಧಕಗಳಿಗೆ ಬಿಜೆಪಿ ಜವಾಬ್ದಾರಿ ಆಗಲಿದೆ ಎಂದು ಎಚ್ಚರಿಕೆಯ ಧಾಟಿಯಲ್ಲಿ ಮಾತನಾಡಿ ದ್ದಾರೆ.
ಕೋರ್ ಕಮಿಟಿ ಹಾಗೂ ಉಸ್ತುವಾರಿಗಳ ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಹಾಸನ, ಮಂಡ್ಯದಲ್ಲಿ ಸ್ವತಂತ್ರವಾಗಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ತ್ರಿಕೋನ ಸ್ಪರ್ಧೆಯಾ ದರೆ ಸುಲಭವಾಗಿ ನಾವು ಗೆಲ್ಲುತ್ತೇವೆ. ಆದರೆ 18 ಕ್ಷೇತ್ರಗಳಲ್ಲಿ ಬಿಜೆಪಿಗೆ ನಮ್ಮ ಪಕ್ಷದಿಂದ ಅನುಕೂಲ ಆಗಲಿದೆ. ಈ ವಿಷಯವನ್ನು ಸಭೆಯಲ್ಲಿ ಚರ್ಚಿಸಿದ್ದೇವೆ. ನಮ್ಮ ಶಕ್ತಿಯನ್ನು ಧಾರೆ ಎರೆದರೆ ಬಿಜೆಪಿಗೆ ಒಳ್ಳೆಯ ಫಲಿತಾಂಶ ಬರುತ್ತದೆ. ಯಾಕೆಂದರೆ ಕರ್ನಾಟಕದ ರಾಜಕೀಯ ಬೇರೆ, ದೇಶದ ಇತರ ರಾಜ್ಯಗಳ ರಾಜಕೀಯವೇ ಬೇರೆ. ಇದನ್ನು ಬಿಜೆಪಿ ವರಿಷ್ಠರ ಗಮನಕ್ಕೆ ತನ್ನಿ ಎಂದು ಮುಖಂಡರು ನನ್ನ ಮೇಲೆ ಒತ್ತಡ ಹಾಕಿದ್ದಾರೆ. ಬಿಜೆಪಿ ಸರಿಯಾಗಿ ನಮ್ಮನ್ನು ಬಳಕೆ ಮಾಡಿಕೊಳ್ಳಲಿ. ಇಲ್ಲದೆ ಹೋದರೆ ಮುಂದೆ ಪೆಟ್ಟು ಬಿದ್ದರೆ ಅದರ ಸಾಧಕ-ಬಾಧಕಗಳಿಗೆ ಬಿಜೆಪಿ ಜವಾಬ್ದಾರಿ ಆಗಲಿದೆ ಎಂದರು.
ಸೀಟು ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗುವವರೆಗೂ ಮಾತನಾಡುವುದಿಲ್ಲ. ಆದರೆ ಅಭ್ಯರ್ಥಿಗಳ ಘೋಷಣೆ ಹಾಗೂ ಕ್ಷೇತ್ರಗಳ ಹಂಚಿಕೆ ವಿಳಂಬ ಆಗುತ್ತಿದೆ ಎಂದು ಪಕ್ಷದ ನಾಯಕರು ಆತಂಕ ವ್ಯಕ್ತಪಡಿಸಿದರು. ನಾವು ಬಿಜೆಪಿಯಿಂದ 6-7 ಸೀಟನ್ನೇನೂ ಕೇಳಿಲ್ಲ. ನಾವು ಕೇಳಿರುವುದು 3-4 ಸೀಟು ಮಾತ್ರ. ನಮ್ಮ ಶಕ್ತಿ ಅವರಿಗೂ ಗೊತ್ತಿದೆ. 3-4 ಸೀಟು ಕೊಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ. ಕೇವಲ ಎರಡು ಕ್ಷೇತ್ರಕ್ಕಾಗಿ ನಾನು ಇಷ್ಟು ಪ್ರಯತ್ನ ಮಾಡಬೇಕಿತ್ತಾ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಭಿವೃದ್ಧಿಗಾಗಿ ಮೈತ್ರಿ ಮಾಡಿಕೊಂಡಿದ್ದು
ನಮ್ಮ ಮತ್ತು ಬಿಜೆಪಿ ಕಾರ್ಯಕರ್ತರು ಗೊಂದಲಕ್ಕೆ ಎಡೆ ಮಾಡಿಕೊಡದೆ ಒಟ್ಟಾಗಿ ಕೆಲಸ ಮಾಡಿ. ಅದು ನನ್ನ ವಿನಂತಿ. ನಮ್ಮ ಗುರಿ ನಾವು ಮುಟ್ಟಬೇಕು. ನಮ್ಮ ಗುರಿ ಅಧಿಕಾರ ಅಲ್ಲ, ರಾಜ್ಯದ ಅಭಿವೃದ್ಧಿ ಮಾತ್ರ. 75 ವರ್ಷಗಳಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ಮೈತ್ರಿ ಕಾರಣ ನಮ್ಮ ರಾಜ್ಯದ ಅಭಿವೃದ್ಧಿಗೆ ಪರಿಹಾರ ತರಬೇಕು. ನಿತ್ಯ ಕೇಂದ್ರದ ಮೇಲೆ ಆರೋಪ ಮಾಡುವ ಕಾಂಗ್ರೆಸ್ 45 ವರ್ಷ ರಾಜ್ಯ, ದೇಶವನ್ನು ಆಳಿದೆ. ಕಾಂಗ್ರೆಸ್ ನ ಕೊಡುಗೆ ರಾಜ್ಯಕ್ಕೆ ಏನು? ನಿಮ್ಮಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಇದನ್ನು ಸರಿ ಮಾಡಲು ನಮ್ಮ ಮೈತ್ರಿ ಆಗಿದೆ. ಲೋಕಸಭೆಯಲ್ಲಿ ನಮ್ಮ ದನಿ ಇರಬೇಕು ಎಂದು ಕುಮಾರಸ್ವಾಮಿ ಇದೇ ವೇಳೆ ಹೇಳಿದರು.