ರಾಮನಗರ: ಲೋಕಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ಬಿಡದಿ ಸಮೀಪ ಇರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ತೋಟದ ಮನೆ “ಪವರ್ ಸೆಂಟರ್’ ಆಗಿ ಮಾರ್ಪಟ್ಟಿದೆ. ಬಿಜೆಪಿ ನಾಯಕರು ಒಬ್ಬರ ಅನಂತರ ಒಬ್ಬರು ಬಿಡದಿ ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರಾಜಕೀಯ ಚರ್ಚೆ ನಡೆಸುತ್ತಿದ್ದು ರಾಜ್ಯ ರಾಜಕಾರಣದ ಹಾಟ್‌ಸ್ಪಾಟ್ ಎನಿಸಿದೆ.
ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಎಚ್.ಡಿ. ಕುಮಾರಸ್ವಾಮಿ ಹೆಚ್ಚಾಗಿ ಬಿಡದಿ ತೋಟದ ಮನೆಯಲ್ಲೇ ವಾಸ್ತವ್ಯ ಹೂಡುತ್ತಿದ್ದು, ರಾಜಕೀಯ ಚಟುವಟಿಕೆಗಳನ್ನು ಇಲ್ಲಿಂದಲೇ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಜೆಡಿಎಸ್ ಮುಖಂಡರಿಂದ ತುಂಬಿರುತ್ತಿದ್ದ ತೋಟದ ಮನೆಗೆ ಇದೀಗ ಬಿಜೆಪಿ ಮುಖಂಡರು ದಾಂಗುಡಿ ಇಡುತ್ತಿದ್ದಾರೆ.
ಬಿಡದಿಯ ಎಚ್‌ಡಿಕೆ ತೋಟದ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಿ.ಪಿ. ಯೋಗೇಶ್ವರ್, ಹರತಾಳು ಹಾಲಪ್ಪ, ತುಮಕೂರು ಶಾಸಕ ಸುರೇಶ್‌ಗೌಡ, ಸಂಸದ ಪ್ರತಾಪ್ ಸಿಂಹ ಹೀಗೆ ಸಾಲು ಸಾಲು ಬಿಜೆಪಿ ನಾಯಕರು ತೋಟದ ಮನೆಗೆ ಭೇಟಿ ನೀಡಿ ರಾಜಕೀಯ ವಿದ್ಯಮಾನಗಳಿಗೆ ಸಂಬಂ ಧಿಸಿದಂತೆ ಚರ್ಚೆ ನಡೆಸುತ್ತಿದ್ದಾರೆ.
ಎಲ್ಲರಿಗೂ ಇದೇ ಜಾಗ ಸೂಕ್ತ
ಮಾತುಕತೆ ನಡೆಸಲು ಬಿಡದಿ ತೋಟದ ಮನೆಯೇ ಸೂಕ್ತವಾಗಿದೆ. ಬೆಂಗಳೂರು ನಗರಕ್ಕೆ ಸಮೀಪದಲ್ಲೇ ಇರುವ ಈ ಸ್ಥಳ ಪ್ರಶಾಂತ ವಾತಾವರಣದಲ್ಲಿದ್ದು ಕೆಲ ರಹಸ್ಯ ಚರ್ಚೆ ನಡೆಸಲು ಸೂಕ್ತವಾಗಿದೆ.