ಅಧಿವೇಶನದಲ್ಲಿ ಸದನಕ್ಕೆ ಬಂದು ವಿದಾಯ ಭಾಷಣ ಮಾಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿ ನಿರ್ಗಮಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಶಾಕ್ ಆಗುವಂತೆ ಖುದ್ದು ವಿಶ್ವಾಸಮತ ಯಾಚನೆ ಪ್ರಸ್ತಾಪ ಮಾಡಿರುವುದರಿಂದ ಬಿಜೆಪಿ ನಾಯಕರು ತಲೆಕೆಡಿಸಿಕೊಂಡಿದ್ದಾರೆ. ಜತೆಗೆ, ಭಾನುವಾರ ರಾತ್ರಿ ಕೆಲವು ಬಿಜೆಪಿ ಶಾಸಕರನ್ನು ಮುಖ್ಯಮಂತ್ರಿಯವರು ಸಂಪರ್ಕಿಸಿದ್ದು ಪೂರಕವಾಗಿ ಸ್ಪಂದಿಸಿರುವುದರ ಮಾಹಿತಿ ಪಡೆದಿರುವುದರಿಂದಲೇ ರೆಸಾರ್ಟ್‌ನಲ್ಲಿ ಕೂಡಿಹಾಕಿದ್ದಾರೆ ಎಂದು ಹೇಳಲಾಗಿದೆ.
ಕುಮಾರಸ್ವಾಮಿಯವರು, ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೇವೇಗೌಡರು ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಸಹಿತ ಎಲ್ಲ ನಾಯಕರ ಜತೆ ಚರ್ಚಿಸಿ ಅತೃಪ್ತ ಶಾಸಕರ ಜತೆಯೂ ಸಂಪರ್ಕದಲ್ಲಿದ್ದು ಅವರ ಎಲ್ಲ ಬೇಡಿಕೆಗಳ ಈಡೇರಿಕೆಗೆ ಸಮ್ಮತಿ ಸೂಚಿಸಿದ್ದಾರೆ.
ಹೀಗಾಗಿ, ಅತೃಪ್ತರು ಮರಳಿ ವಾಪಸ್ ಬರುವ ನಿರೀಕ್ಷೆಯಿದ್ದು ಹೀಗಾಗಿಯೇ ವಿಶ್ವಾಸಮತಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಜತೆಗೆ, ಬಿಜೆಪಿ ಜತೆ ಜೆಡಿಎಸ್ ಹೋಗಲಿದೆ ಎಂಬ ವದಂತಿಯಿಂದ ಕಾಂಗ್ರೆಸ್‌ನ ಅತೃಪ್ತರು ಬೆಚ್ಚಿ ಬಿದ್ದಿದ್ದು ವಾಪಸ್ ಆಗಲು ಕೆಲವರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿಯೂ ಇದೆ. ಇದರ ಜತೆಗೆ ಕೆಲವು ಗುಪ್ತ ಕಾರ್ಯತಂತ್ರಗಳನ್ನೂ ಕುಮಾರಸ್ವಾಮಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದರ ನಡುವೆ , ಸ್ಪೀಕರ್ ಅವರು ಅವಕಾಶ ನೀಡುವ ದಿನ ವಿಶ್ವಾಸಮತ ಯಾಚಿಸಿ ಒಂದೊಮ್ಮೆ ಸದನದಲ್ಲಿ ವಿಶ್ವಾಸಮತಕ್ಕೆ ಸೋಲಾದರೆ ವಿದಾಯ ಭಾಷಣ ಮಾಡಿ ನಿರ್ಗಮಿಸಲಿದ್ದಾರೆ. ಹೀಗಾಗಿಯೇ ನಾನು ಅಧಿಕಾರಕ್ಕೆ ಅಂಟಿ ಕುಳಿತಿಲ್ಲ, ಎಲ್ಲದಕ್ಕೂ ಸಿದ್ಧನಾಗಿಯೇ ಇದ್ದೇನೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.