Advertisement

ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಎಚ್‌ಡಿಕೆ

07:17 AM Jul 15, 2019 | Team Udayavani |

ಬೆಂಗಳೂರು: “ಮ್ಯಾರಥಾನ್‌ ಸಂಧಾನ’ದ ಬಳಿಕವೂ ಯೂ ಟರ್ನ್ ಹೊಡೆದು ಕಾಂಗ್ರೆಸ್‌ ಶಾಸಕ ಎಂಟಿಬಿ ನಾಗರಾಜ್‌ ಅವರು ಮುಂಬೈಗೆ ಹಾರಿದ ಪರಿಣಾಮ, ಜೆಡಿಎಸ್‌ ಪಾಳೆಯದಲ್ಲಿ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೊಂದಿಗೆ ಸುದೀರ್ಘ‌ ಮಾತುಕತೆ ನಡೆಸಿದ್ದಾರೆ.

Advertisement

ಭಾನುವಾರ ಪದ್ಮನಾಭನಗರದ ನಿವಾಸಕ್ಕೆ ತೆರಳಿ ದೇವೇಗೌಡರೊಂದಿಗೆ ಸತತ ನಾಲ್ಕು ಗಂಟೆ ಚರ್ಚೆ ನಡೆಸಿದ ಕುಮಾರಸ್ವಾಮಿ, ಈ ವೇಳೆ ಕಾಂಗ್ರೆಸ್‌ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದರು. ಈ ಹಂತದಲ್ಲಿ ಏನು ಮಾಡಬೇಕು? ವಿಶ್ವಾಸಮತ ಯಾಚನೆಗಿಂತ ಮುಂಚೆಯೇ ರಾಜೀನಾಮೆ ಕೊಡಬೇಕೇ ಎಂದು ಕೇಳುತ್ತಾ ಒಂದು ಹಂತದಲ್ಲಿ ರಾಜೀನಾಮೆಯ ಇಂಗಿತವನ್ನೂ ವ್ಯಕ್ತಪಡಿಸಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಆದರೆ, ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳುವುದು ಬೇಡ. ಮಂಗಳವಾರದ ಸುಪ್ರೀಂಕೋರ್ಟ್‌ನ ತೀರ್ಪು ಏನಾಗುತ್ತದೆ ಎಂದು ನೋಡಿ ಅದರ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳೋಣ. ಅಲ್ಲಿಯವರೆಗೆ ಸುಮ್ಮನಿರಿ ಎಂದು ದೇವೇಗೌಡರು ಸಲಹೆ ನೀಡಿದರು ಎನ್ನಲಾಗಿದೆ.

ಶನಿವಾರ ರಾತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಂಧಾನ ಮಾತುಕತೆ ನಡೆದು ರಾಜೀನಾಮೆ ವಾಪಸ್‌ ಪಡೆಯುವುದಾಗಿ ಹೇಳಿ ತೆರಳಿದ್ದ ಎಂಟಿಬಿ ನಾಗರಾಜ್‌, ಇದ್ದಕ್ಕಿದ್ದಂತೆ ವಿಶೇಷ ವಿಮಾನದ ಮೂಲಕ ಭಾನುವಾರ ಬೆಳಗ್ಗೆ ಮುಂಬೈಗೆ ಹಾರಿದ್ದರಿಂದ ಒಂದಷ್ಟು ಬೇಸರಗೊಂಡಿರುವ ಕುಮಾರಸ್ವಾಮಿ, ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ವೇಳೆ, ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆದ ಸಂಧಾನ ಮಾತುಕತೆ, ಎಂಟಿಬಿ ನಾಗರಾಜ್‌ ಮುಂದಿಟ್ಟ ಬೇಡಿಕೆ, ಅದಕ್ಕೆ ತಾವು ನೀಡಿದ ಭರವಸೆ ಇವೆಲ್ಲವನ್ನೂ ವಿವರಿಸಿದರು. ಇಷ್ಟಾದರೂ ನಾಗರಾಜ್‌ ಮುಂಬೈಗೆ ತೆರಳಿದ್ದಾರೆ. ಇದೇ ರೀತಿ ಎಲ್ಲರೂ “ಕೈ’ ಕೊಟ್ಟರೆ ಏನು ಮಾಡುವುದು. ಅನಗತ್ಯವಾಗಿ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

Advertisement

ಎಲ್ಲವನ್ನೂ ಸಮಾಧಾನದಿಂದ ಕೇಳಿದ ದೇವೇಗೌಡರು, ಅಲ್ಲಿಂದಲೇ ಕಾಂಗ್ರೆಸ್‌ ನಾಯಕರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ ಬಳಿಕ ಧೈರ್ಯದಿಂದಿರಿ. ತಕ್ಷಣಕ್ಕೆ ಯಾವುದೇ ಆತುರದ ತೀರ್ಮಾನ ಬೇಡ. ಮಂಗಳವಾರ ಹೇಗೂ ಸುಪ್ರೀಂಕೋರ್ಟ್‌ ತೀರ್ಪು ಬರಲಿದೆ. ಅಲ್ಲದೇ ಸ್ಪೀಕರ್‌ ತೀರ್ಮಾನವೂ ಇರಲಿ.

ಜೊತೆಗೆ, ಬುಧವಾರ ವಿಶ್ವಾಸಮತ ಯಾಚನೆಗೆ ಸಮಯ ಕೋರಿದ್ದರಿಂದ, ಸ್ಪೀಕರ್‌ ಸಮಯ ಕೊಟ್ಟ ಮೇಲೆ ಏನೆಲ್ಲ ತೀರ್ಮಾನಗಳು ಆಗುತ್ತವೆ ಎಂದು ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳೋಣ ಎಂದು ಕಿವಿಮಾತು ಹೇಳಿದರು ಎನ್ನಲಾಗಿದೆ. ಅದಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೆ.ಕೆ.ಗೆಸ್ಟ್‌ಹೌಸ್‌ಗೆ ತೆರಳಿ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಪಾಲ್ಗೊಂಡರು.

ಅಲ್ಲಿಂದ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಸಚಿವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ತೆರಳಿ, ನಾಗೇಂದ್ರ ಅವರ ಆರೋಗ್ಯ ವಿಚಾರಿಸಿದರು. ಅವರೂ ಸಹ “ಆಪರೇಷನ್‌ ಕಮಲ’ಕ್ಕೆ ಒಳಗಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಸರ್ಕಾರವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ನಸುಕಿನವರೆಗೆ ರೆಸಾರ್ಟ್‌ನಲ್ಲಿ ಸಿಎಂ ಚರ್ಚೆ: ಇದೇ ವೇಳೆ ಶನಿವಾರ ರಾತ್ರಿ ಜೆಡಿಎಸ್‌ ಶಾಸಕರು ತಂಗಿರುವ ದೇವನಹಳ್ಳಿ ಬಳಿಯ ರೆಸಾರ್ಟ್‌ಗೆ ತೆರಳಿದ ಮುಖ್ಯಮಂತ್ರಿಯವರು ನಸುಕಿನ 3 ಗಂಟೆವರೆಗೆ ಶಾಸಕರೊಂದಿಗೆ ಚರ್ಚಿಸಿದರು. ಈ ವೇಳೆ ಕಾಂಗ್ರೆಸ್‌ ಪಕ್ಷದ ಬೇಡಿಕೆ, ಅತೃಪ್ತ ಶಾಸಕರ ಬೇಡಿಕೆಗಳನ್ನು ವಿವರಿಸಿದರು. ಕಾಂಗ್ರೆಸ್‌ ಪಕ್ಷದವರು ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದಾರೆ.

ಅವುಗಳನ್ನು ಈಡೇರಿಸಬೇಕಾದರೆ, ನಾವು (ಜೆಡಿಎಸ್‌ ಶಾಸಕರು) ಒಂದಿಷ್ಟು ತ್ಯಾಗ ಮಾಡಬೇಕಾಗುತ್ತದೆ. ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ, ನಿಮ್ಮ ಸಹಕಾರ ಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ “ನೀವು ಮುಖ್ಯಮಂತ್ರಿಯಾಗಿ ಮುಂದುವರಿಯುವುದಾದರೆ ನಾವು ಎಂತಹ ತ್ಯಾಗಕ್ಕೂ ಸಿದ್ಧ.

ಆದರೆ, ಕಾಂಗ್ರೆಸ್‌ ಪಕ್ಷದವರು ನಿಮ್ಮನ್ನು ನಂಬಿಸಿ ಮೋಸ ಮಾಡದಂತೆ ಎಚ್ಚರಿಕೆ ವಹಿಸಿ ಎಂದು ಶಾಸಕರು ಸಲಹೆ ನೀಡಿದರು. ಸೋಮವಾರದವರೆಗೆ ಜೆಡಿಎಸ್‌ನ ಎಲ್ಲ ಶಾಸಕರು ರೇಸಾರ್ಟ್‌ನಲ್ಲೇ ಉಳಿದು ಅಲ್ಲಿಂದಲೇ ಸೋಮವಾರ ಅಧಿವೇಶನಕ್ಕೆ ಬರುವ ಬಗ್ಗೆ ತೀರ್ಮಾನವಾದ ಬಳಿಕ ಕುಮಾರಸ್ವಾಮಿ ರೇಸಾರ್ಟ್‌ನಿಂದ ಹೊರಟು, ದೇವೇಗೌಡರ ಭೇಟಿಗೆ ತೆರಳಿದರು.

ಕಲಾಪಕ್ಕೆ ಗೈರಾಗದಂತೆ ತಾಕೀತು: ಸೋಮವಾರವೇ ಬಿಜೆಪಿಯವರು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪ್ರತಿಪಕ್ಷವನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಬೇಕು. ಏನೇ ವಿಚಾರ ಬಂದರೂ ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕು. ಇದಕ್ಕಾಗಿ ಯಾರೂ ಕಲಾಪಕ್ಕೆ ಗೈರು ಹಾಜರಾಗಬಾರದು. ಅಲ್ಲದೇ ಕಲಾಪ ನಡೆಯುತ್ತಿರುವಾಗ ಹೊರಗಡೆ ಹೋಗುವುದು, ಮೊಗಸಾಲೆಯಲ್ಲಿ ಕುಳಿತುಕೊಳ್ಳುವುದನ್ನು ಮಾಡಬಾರದು ಎಂದು ಜೆಡಿಎಸ್‌ ಶಾಸಕರಿಗೆ ತಾಕೀತು ಮಾಡಲಾಗಿದೆ ಎಂದು ಹೇಳಲಾಗಿದೆ.

* ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next