ದಾವಣಗೆರೆ: “ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಏಜೆಂಟ್ ಇದ್ದಂತೆ. ಸೂಟ್‌ಕೇಸ್ ಕೊಂಡೊಯ್ಯುವುದಕ್ಕೆ ರಾಜ್ಯಕ್ಕೆ ಬರುತ್ತಾರೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಕುಮಾರಸ್ವಾಮಿ ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿಗೆ ನಾಲಿಗೆ ಮೇಲೆ ಹಿಡಿತವೇ ಇಲ್ಲ. ಒಂದೇ ಮನೆಯಲ್ಲಿರುವ ಎಲ್ಲರನ್ನೂ ತೃಪ್ತಿಪಡಿಸಲು ಆಗುವುದೇ ಇಲ್ಲ. ನಮ್ಮ ಸಚಿವ ಸಂಪುಟದಲ್ಲಿ ಯಾರೂ ಅಸಮಾಧಾನಿತರಿಲ್ಲ. ಇನ್ನೂ ನಾಲ್ಕು ಸ್ಥಾನಗಳು ಖಾಲಿ ಇವೆ. ಸ್ಥಾನಗಳ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆ ಮತ್ತು ಪರಮಾಧಿಕಾರ. ಮಾಜಿ ಸಚಿವ ಎಂ.ಬಿ. ಪಾಟೀಲ್ ಈಗಾಗಲೇ ಪ್ರತ್ಯೇಕ ಧರ್ಮ ಹೋರಾಟ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಮುಂದೆ ಅಂತದ್ದೇ ಪ್ರಯತ್ನ ಮಾಡಿದರೆ ಸರ್ವನಾಶ ಆಗುತ್ತಾರೆ ಎಂದರು.
ಇದನ್ನೂ ಓದಿ:ತಮ್ಮ ಫೋಟೋ ಹಾಕಿ ‘RIP’ ಹೇಳಿದ್ದಕ್ಕೆ ನಟ ಸಿದ್ದಾರ್ಥ ಪ್ರತಿಕ್ರಿಯೆ ಏನು ?
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯಕ್ಕೆ ಪದೇಪದೆ ಭೇಟಿ ನೀಡುತ್ತಿದ್ದಾರೆ. ಅವರು ಬ್ಯಾಗ್, ಸೂಟ್‌ಕೇಸ್‌ಗಳಲ್ಲಿ ಹಣ ಕೊಂಡೊಯ್ಯಲು ಬರುತ್ತಾರೆಂಬುದು ನಿರಾಧಾರ. ಸೂಟ್‌ಕೇಸ್ ಪದ್ಧತಿ ಕುಮಾರಸ್ವಾಮಿ ಅವರ ಪಕ್ಷದಲ್ಲಿರಬಹುದು. ನಮ್ಮಲ್ಲಿಲ್ಲ.
-ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಅರುಣ್ ಸಿಂಗ್ ಏಜೆಂಟ್ ಅಲ್ಲ. ಬಿಜೆಪಿಯಲ್ಲಿ ಹಣ ನೀಡುವ ಸಂಸ್ಕೃತಿಯೇ ಇಲ್ಲ. ಕುಮಾರಸ್ವಾಮಿಯವರಲ್ಲಿ ಅಂತಹ ಸಂಸ್ಕೃತಿ ಇರಬಹುದು. ಏಕೆಂದರೆ ಅವರು ಕಾಂಗ್ರೆಸ್ ನಾಯಕರಿಗೆ ಹಣ ಕೊಟ್ಟಿರಬಹುದು.
– ಎಂ.ಪಿ. ರೇಣುಕಾಚಾರ್ಯ, ಶಾಸಕ