ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆ ಖರ್ಚಿಗಾಗಿ ಬರೋಬ್ಬರಿ 50 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಉದ್ಯಮಿ ವಿಜಯ್ ಟಾಟಾ ನೀಡಿರುವ ದೂರಿನ ಆಧಾರದ ಮೇರೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹಾಗೂ ಜೆಡಿಎಸ್‌ನ ಮಾಜಿ ವಿಧಾನ ಪರಿಷತ್ತು ಸದಸ್ಯ ರಮೇಶ್ ಗೌಡ (Ramesh Gowda) ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಕರಣದ 2ನೇ ಆರೋಪಿ ಮಾಡಲಾಗಿದ್ದು, ರಮೇಶ್ ಗೌಡ ಮೊದಲ ಆರೋಪಿಯಾಗಿದ್ದಾರೆ. ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬುವವರು ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್‌ನಲ್ಲಿ ಏನಿದೆ?: ಹೀಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ರಮೇಶ್ ಗೌಡ ಆ.24ರಂದು ರಾತ್ರಿ 10 ಗಂಟೆಗೆ ಮನೆಗೆ ಆಗಮಿಸಿ ಊಟ ಮಾಡುತ್ತಾ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ವಿವರಿಸತೊಡಗಿದರು. ನಿಖಿಲ್ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡುವುದು ಅಂತಿಮವಾಗಿದ್ದು, ಈ ಬಾರಿಯ ಚುನಾವಣಾ ಕಾರ್ಯಗಳಲ್ಲಿ ಸಕ್ರಿಯವಾಗಿರಲು ಮನವಿ ಮಾಡಿದರು. ಅದರ ಬಗ್ಗೆ, ನಾನು ಆಲೋಚಿಸುತ್ತಿರುವಾಗಲೇ ತಮ್ಮ ಮೊಬೈಲ್‌ನಿಂದ ಎಚ್.ಡಿ. ಕುಮಾರಸ್ವಾಮಿಗೆ ಕರೆ ಮಾಡಿದರು. ನನ್ನ ಜತೆ ಮಾತನಾಡಿದ ಕುಮಾರಸ್ವಾಮಿ ಈ ಬಾರಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಮಗೆ ಗೆಲುವು ಅನಿವಾರ್ಯ. ಚುನಾವಣಾ ಖರ್ಚಿಗಾಗಿ ನೀವು 50 ಕೋಟಿ ರೂ. ಕೊಡಬೇಕಾಗುತ್ತದೆ ಎಂದರು. ಕುಮಾರಸ್ವಾಮಿ ಮಾತಿನಿಂದ ವಿಚಲಿತನಾದ ನಾನು ಕೂಡಲೇ “ಸರ್ ನನ್ನ ಬಳಿಯಲ್ಲಿ ಅಷ್ಟೊಂದು ಹಣವಿಲ್ಲ. ನಾನು ನನ್ನ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಗಳನ್ನು ಕಂಪ್ಲೀಟ್ ಮಾಡಬೇಕು. ಹೀಗಾಗಿ ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಅಷ್ಟೇ’ ಎಂದು ಉತ್ತರಿಸಿದೆ. ನನ್ನ ಮಾತಿನಿಂದ ಕೋಪಗೊಂಡ ಕುಮಾರಸ್ವಾಮಿ “50 ಕೋಟಿ ರೆಡಿ ಮಾಡಿ ಇಲ್ಲದೇ ಹೋದರೇ ನಾನು ಏನು ಮಾಡುತ್ತೀನೋ ಗೊತ್ತಿಲ್ಲ, ಎಸ್ಟೇಟ್ ಉದ್ಯಮ ನಡೆಸುವುದಷ್ಟೇ ಅಲ್ಲ. ಇಲ್ಲಿ ಬದುಕುವುದೇ ಕಷ್ಟವಾಗುತ್ತೆ ಎಂದು ಬೆದರಿಕೆ ಹಾಕಿ ಫೋನ್ ಕಟ್ ಮಾಡಿದರು. ಬಳಿಕ ರಮೇಶ್ ಗೌಡ, ಕುಮಾರಣ್ಣ ಹೇಳಿದಂತೆ 50 ಕೋಟಿ ಸಿದ್ಧಪಡಿಸಿಕೊಳ್ಳಿ. ಹಣವನ್ನು ನೀಡದೇ ಇದ್ದರೆ ನಿಮಗೆ ತೊಂದರೆಗಳು ಎದುರಾಗುತ್ತವೆ ಎಂದು ಧಮ್ಕಿ ಹಾಕಿದರು ಎಂದು ಎಫ್ಐಆರ್‌ನಲ್ಲಿ ವಿಜಯ್ ಟಾಟಾ ಉಲ್ಲೇಖೀಸಿದ್ದಾರೆ.
ರಮೇಶ್ ಗೌಡ ಪ್ರತಿದೂರು
ಚನ್ನಪಟ್ಟಣ ಉಪಚುನಾವಣೆ ಖರ್ಚಿಗಾಗಿ ಬರೋಬ್ಬರಿ 50 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಉದ್ಯಮಿ ವಿಜಯ್ ಟಾಟಾ ಕೊಟ್ಟಿರುವ ದೂರಿಗೆ ಪ್ರತಿಯಾಗಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ರಮೇಶ್ ಗೌಡ ಅಮೃತಹಳ್ಳಿ ಪೊಲೀಸ್ ಠಾಣೆಗೆ ಪ್ರತಿ ದೂರು ನೀಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಜಯ್ ಟಾಟಾ ಸುಳ್ಳು ದೂರು ನೀಡಿದ್ದಾರೆ ಎಂದು ರಮೇಶ್ ಗೌಡ ಆರೋಪಿಸಿದ್ದಾರೆ. ಪೊಲೀಸರು ದೂರನ್ನು ಸ್ವೀಕರಿಸಿದ್ದಾರೆ. ಆದರೆ, ಇದುವರೆಗೆ ಯಾವುದೇ ಎಫ್ ಐಆರ್ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಮಾಜಿ ಎಂಎಲ್‌ಸಿ ರಮೇಶ್ ಗೌಡ ಕೊಟ್ಟ ದೂರಿನಲ್ಲೇನಿದೆ?: ಆ.24ರಂದು ಮನೆಗೆ ಊಟಕ್ಕೆ ಕರೆದಾಗ ಬೆದರಿಕೆ ಹಾಕಿದ್ದಾರೆ. ನಾನು ಈಗಾಗಲೇ ಉದ್ಯಮದಲ್ಲಿ ನಷ್ಟ ಹೊಂದಿದ್ದೇನೆ. ನನಗೆ 100 ಕೋಟಿ ರೂಪಾಯಿ ಬೇಕು. ನೀವು ನೂರು ಕೋಟಿ ರೂ. ಕೊಡಿ, ಇಲ್ಲವಾದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ರಮೇಶ್ ಗೌಡ ಹೇಳಿದ್ದಾರೆ.