Advertisement

ಸಿದ್ದು ತವರಿಗೆ ಎ‍ಚ್ಡಿಕೆ ಕೊಡುಗೆ ಶೂನ್ಯ

05:48 AM Feb 09, 2019 | |

ಮೈಸೂರು: ಸಿದ್ದರಾಮಯ್ಯ ಅವರ ಮಾಡು ಇಲ್ಲವೇ ಮಡಿ ಹೋರಾಟದ ನಡುವೆಯೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲ್ಲಿಸಿ ಪಕ್ಷಕ್ಕೆ ಬಲ ನೀಡಿದ ಮೈಸೂರು ಜಿಲ್ಲೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಷ್ಟೇನೂ ಕೊಡುಗೆ ನೀಡಿಲ್ಲ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಮಂಡಿಸಿದ 2019-20ನೇ ಸಾಲಿನ ಮುಂಗಡಪತ್ರದಲ್ಲೂ ಮೈಸೂರಿಗೆ ಹೆಚ್ಚೇನೂ ಕೊಡದೆ ಜಿಲ್ಲೆಯ ಬಗೆಗೆ ಮಲತಾಯಿ ಧೋರಣೆ ಮುಂದುವರಿಸಿದ್ದಾರೆ.

Advertisement

2018ರ ಜುಲೈ 5ರಂದು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಚೊಚ್ಚಲ ಬಜೆಟ್, ಹಾಸನ ಮತ್ತು ರಾಮನಗರ ಜಿಲ್ಲೆಗಳಿಗೆ ಸೀಮಿತವಾದ ಅಣ್ತಮ್ಮ ಬಜೆಟ್ ಎಂಬ ಅಪವಾದದಿಂದ ಹೊರಬರಲು ಯತ್ನಿಸಿರುವ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು 2019ರ ಫೆ.8ರಂದು ಮಂಡಿಸಿದ 2019-20ನೇ ಸಾಲಿನ ತಮ್ಮ ಸರ್ಕಾರದ ಎರಡನೇ ಆಯವ್ಯಯದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಯೋಜನೆಗಳು ಮತ್ತು ಅನುದಾನ ಹಂಚಿಕೆಯ ಘೋಷಣೆ ಮಾಡಿದರಾದರೂ ಈ ಬಾರಿಯೂ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಗೇ ಸಿಂಹಪಾಲು ದೊರೆತಿದ್ದು,

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ತವರು ಜಿಲ್ಲೆ, ಜೊತೆಗೆ ತಮ್ಮ ಸಂಪುಟದಲ್ಲಿ ಉನ್ನತ ಶಿಕ್ಷಣ, ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆಗಳಂತಹ ಪ್ರಭಾವಿ ಖಾತೆ ಹೊಂದಿರುವ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್‌ ಅವರ ಇಲಾಖೆಗಳಡಿ ಮೈಸೂರು ಜಿಲ್ಲೆಗೆ ಘೋಷಣೆಯಾದ ಕಾರ್ಯಕ್ರಮಗಳು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಂತಿದೆ.

ಮೈಸೂರಿನ ಪ್ರವಾಸಿತಾಣಗಳ ವೀಕ್ಷಣೆಗೆ ಕೆಎಸ್‌ಟಿಡಿಸಿವತಿಯಿಂದ ಲಂಡನ್‌ ಬಿಗ್‌ಬಸ್‌ ಮಾದರಿಯ ಆರು ಡಬಲ್‌ ಡೆಕ್ಕರ್‌ ತೆರೆದ ಬಸ್‌ ಸೇವೆ ಪ್ರಾರಂಭಕ್ಕೆ 5 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ನಗರ ಭೂಸಾರಿಗೆ ನಿರ್ದೇಶನಾಲಯದ ವತಿಯಿಂದ ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಬಗ್ಗೆ ಪೂರ್ವ ಕಾರ್ಯ ಸಾಧ್ಯತಾ ವರದಿ ತಯಾರಿಕೆ ಪರಿಶೀಲನೆ ಬಗ್ಗೆ ಮುಂಗಡಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ವನ್ಯಜೀವಿಗಳ ಹಾವಳಿ ತಡೆಗೆ 100 ಕೋಟಿ ರೂ.: ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದ ಮಾನವ- ಆನೆ ಸಂಘರ್ಷ ನಿಯಂತ್ರಣಕ್ಕಾಗಿ ಉಪಯೋಗಿಸಿದ ರೈಲುಹಳಿ ತಡೆಗೋಡೆಯಿಂದ ಮಾನವ-ಆನೆ ಸಂಘರ್ಷ ನಿಯಂತ್ರಣ ಯೋಜನೆಯಡಿ ರೈಲುಹಳಿ ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳು ಬರುವುದರಿಂದ ಈ ಯೋಜನೆಯ ಪ್ರಯೋಜನ ದೊರೆಯಲಿದೆ.

Advertisement

ರಕ್ತನಿಧಿ ಕೇಂದ್ರ ಸ್ಥಾಪನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಕ್ತ ಸಂಗ್ರಹಣೆ, ಶೇಖರಣೆ ಮತ್ತು ವಿತರಣೆಗಾಗಿ ನಾಲ್ಕು ವಿಭಾಗೀಯ ಮಾದರಿ ರಕ್ತನಿಧಿ ಕೇಂದ್ರಗಳ ಸ್ಥಾಪನೆಗೆ 10 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಮೈಸೂರು ಇರುವುದರಿಂದ ಈ ಯೋಜನೆ ಮೈಸೂರಿಗೆ ದೊರೆಯಲಿದೆ.

ತರಬೇತಿ ಕೇಂದ್ರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಮಟ್ಟದ ಕರ್ಮಚಾರಿಗಳಿಗೆ ತರಬೇತಿ ನೀಡಲು ಮೈಸೂರಿನಲ್ಲಿ ವಿಭಾಗಮಟ್ಟದ ತರಬೇತಿ ಕೇಂದ್ರ ಪ್ರಾರಂಭಿಸಲು 5 ಕೋಟಿ ಅನುದಾನ ಘೋಷಿಸಲಾಗಿದೆ. ಹಿಂದುಳಿದ ವರ್ಗಗಳ ಮೊರಾರ್ಜಿ ಪದವಿಪೂರ್ವ ಕಾಲೇಜುಗಳಲ್ಲಿ ಐಐಟಿ, ನೀಟ್ ಪರೀಕ್ಷಾ ತರಬೇತಿ ಕೇಂದ್ರ ಪ್ರಾರಂಭಿಸಲು 4 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೈಸೂರಿನಲ್ಲಿರುವ ಜೆಎಸ್‌ಎಸ್‌ ಅರ್ಬನ್‌ ಹಾತ್‌ನಲ್ಲಿ ಕರಕುಶಲಕರ್ಮಿಗಳಿಗೆ ವ್ಯವಸ್ಥಿತ ಸೌಲಭ್ಯ ಕಲ್ಪಿಸಲು ಹಾಗೂ ಉನ್ನತೀಕರಿಸಲು 5 ಕೋಟಿ ರೂ. ಅನುದಾನ.

ಪಾಲಿಕೆಗೆ 150 ಕೋಟಿ ರೂ.: ನಗರಾಭಿವೃದ್ಧಿ ಇಲಾಖೆಯಡಿ ಪೌರಾಡಳಿತ ನಿರ್ದೇಶನಾಲಯದಿಂದ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಜಾರಿಗಾಗಿ ಮೈಸೂರು ಮಹಾ ನಗರಪಾಲಿಕೆಗೆ 150 ಕೋಟಿ ರೂ. ಅನುದಾನ, ಕಂದಾಯ ಇಲಾಖೆಯಿಂದ ಮೈಸೂರು ಜಿಲ್ಲೆಯಲ್ಲಿ ಡ್ರೋಣ್‌ಗಳ ಮೂಲಕ ರೀ-ಸರ್ವೆ ಕಾರ್ಯ ಮಾಡಲಾಗುವುದು ಎಂದು ಹೇಳಲಾಗಿದೆ.

ತಾಲೂಕುಗಳಿಗೆ ಅನುದಾನ: ಉಳಿದಂತೆ ಹುಣಸೂರು ತಾಲೂಕಿನಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿಯಿಂದ ನೀರೆತ್ತಿ ಹುಣಸೂರು ಮತ್ತು ಎಚ್.ಡಿ.ಕೋಟೆ ತಾಲೂಕಿಗೆ ಕುಡಿಯುವ ನೀರು ಒದಗಿಸಲು 50 ಕೋಟಿ ಅನುದಾನ, ನಂಜನಗೂಡು ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ 80 ಕೋಟಿ ಅನುದಾನ, ತಿ.ನರಸೀಪುರ ತಾಲೂಕಿನಲ್ಲಿ ನೀರಾವರಿ ಯೋಜನೆಗೆ 50 ಕೋಟಿ ಅನುದಾನ,ಕೆ.ಆರ್‌.ನಗರ ತಾಲೂಕಿನಲ್ಲಿ ಹಾದು ಹೋಗುವ ಹಾರಂಗಿ ಬಲದಂಡೆ ನಾಲೆಯ ಆಧುನೀಕರಣಕ್ಕೆ 40 ಕೋಟಿ, ಪಿರಿಯಾಪಟ್ಟಣ ತಾಲೂಕಿನಲ್ಲಿ 40 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ, ಮೈಸೂರಿನಲ್ಲಿ ಭಾಷಾ ಕೌಶಲ್ಯ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.

ದಸರಾ ಪ್ರಾಧಿಕಾರದ ಪ್ರಸ್ತಾಪವೇ ಇಲ್ಲ: ಶಿಕ್ಷಣ, ಉದ್ಯೋಗ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ಜನರು ರಾಜಧಾನಿ ಬೆಂಗಳೂರಿನ ನಂತರ ಎದುರು ನೋಡುವುದು ಅರಮನೆಗಳ ನಗರಿ ಮೈಸೂರನ್ನು. ಆದರೆ, ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ದಸರಾ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಪ್ರಾಧಿಕಾರ ರಚಿಸುವಂತೆ ಹಲವು ವರ್ಷಗಳ ಒತ್ತಾಯವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ನಲ್ಲಿ ಆ ಬಗ್ಗೆ ಚಕಾರ ಎತ್ತಿಲ್ಲ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next