ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಚಿತ್ರಣ ಬದಲಾಗುತ್ತಿದ್ದು ರಾಮನಗರದಿಂದ ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಣಕ್ಕಿಳಿಯಲು ಕಾರ್ಯತಂತ್ರ ರೂಪಿಸಲಾಗಿದೆ. ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ರಾಮನಗರದಿಂದ ಸ್ಪರ್ಧಿಸುತ್ತಾರೆಂದು ಈಗಾಗಲೇ ಘೋಷಿಸಲಾಗಿದೆಯಾದರೂ ಡಿ.ಕೆ.ಸುರೇಶ್ ಅಭ್ಯರ್ಥಿಯಾದರೆ ಖುದ್ದು ಕುಮಾರಸ್ವಾಮಿ ಕಣಕ್ಕಿಳಿಯುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಆಗ ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನಲ್ಲಿ ಇದ್ದಕ್ಕಿದ್ದಂತೆ ಡಿ.ಕೆ.ಸುರೇಶ್ ಹೆಸರು ರಾಮನಗರಕ್ಕೆ ಪ್ರಸ್ತಾವವಾದ ಬೆನ್ನಲ್ಲೇ ಗೌಡರ ಕುಟುಂಬದಲ್ಲಿ ಮಹತ್ವದ ಸಮಾಲೋಚನೆ ನಡೆದಿದ್ದು, ಕಾಂಗ್ರೆಸ್ ಕಾರ್ಯತಂತ್ರಕ್ಕೆ ಪ್ರತಿತಂತ್ರ ರೂಪಿಸಲು ನಿರ್ಧರಿಸಲಾಗಿದೆ.
ಅತ್ತ ಹಾಸನದಲ್ಲಿ ಡಿ.ಕೆ.ಸುರೇಶ್ ಉಸ್ತುವಾರಿಯಾಗಿ ಶಿವಲಿಂಗೇಗೌಡರನ್ನು ಸೆಳೆದು ಜೆಡಿಎಸ್ ವಿರುದ್ಧ ಪ್ರತಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಶೋಧ ನಡೆಸುತ್ತಿದ್ದಾರೆ. ಇತ್ತ ರಾಮನಗರದಲ್ಲೂ ಇದೀಗ ತಾವೇ ಅಭ್ಯರ್ಥಿಯಾಗಲು ಹೊರಟಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಡಿ.ಕೆ.ಶಿವಕುಮಾರ್ ಸಹೋದರರು ಜೆಡಿಎಸ್ ಅನ್ನು ಟಾರ್ಗೆಟ್ ಮಾಡಿಕೊಂಡಂತಿದೆ. ಇದಕ್ಕೆ ಪ್ರತಿತಂತ್ರವಾಗಿ ಕನಕಪುರದಲ್ಲೂ ಜೆಡಿಎಸ್‌ನ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧಿಸಲು ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡನನ್ನು ಗುರುತಿಸಿ ಒಪ್ಪಿಸಲಾಗಿದ್ದು, ಕೊನೇ ಕ್ಷಣದವರೆಗೂ ಹೆಸರು ಬಹಿರಂಗಪಡಿಸದೆ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸಿದ್ದು ಮಣಿಸಲು ತಂಡ: ಗುಬ್ಬಿ ಶ್ರೀನಿವಾಸ್, ಕೋಲಾರದ ಶ್ರೀನಿವಾಸಗೌಡ, ಅರಕಲಗೂಡು ಎ.ಟಿ.ರಾಮಸ್ವಾಮಿ, ಅರಸೀಕೆರೆ ಶಿವಲಿಂಗೇಗೌಡ ಅವರು ಜೆಡಿಎಸ್ ತ್ಯಾಗ ಮಾಡಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕಾರಣ. ಜೆಡಿಎಸ್ ಶಕ್ತಿ ಕುಂದಿಸಲು ಐವರು ಶಾಸಕರಿಗೆ ಗಾಳ ಹಾಕಿ ಜಿ.ಟಿ.ದೇವೇಗೌಡ ಹೊರತುಪಡಿಸಿ ಉಳಿದವರು ಪಕ್ಷ ಬಿಡುವಂತೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಹಿತ ಕಾಂಗ್ರೆಸ್‌ನ ಪ್ರಭಾವಿ ನಾಯಕರು ಸ್ಪರ್ಧಿಸುವ ಕ್ಷೇತ್ರಗಳ ಬಗ್ಗೆ ವಿಶೇಷ ಒತ್ತು ನೀಡಬೇಕು ಎಂದು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ನಡುವೆ, ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಕೋಲಾರ ಕ್ಷೇತ್ರದಲ್ಲಿ ಗೆಲುವಿಗೆ ರೂಪಿಸಬೇಕಾದ ತಂತ್ರಗಾರಿಕೆ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಖುದ್ದಾಗಿ ಜಿಲ್ಲಾ ನಾಯಕರ ಜತೆ ಸಂಪರ್ಕ ಮಾಡುತ್ತಿದ್ದಾರೆ. ಕೋಲಾರ ಕ್ಷೇತ್ರದ ಸ್ಥಿತಿಗತಿ, ಶಾಸಕ ಶ್ರೀನಿವಾಸಗೌಡರ ಜತೆ ಹೋಗಿರುವ ಜೆಡಿಎಸ್ ಮುಖಂಡರು ಹಾಗೂ ಅವರ ಸಾಮರ್ಥ್ಯ ಮತ್ತಿತರ ಮಾಹಿತಿ ಪಡೆದುಕೊಂಡಿರುವ ದೇವೇಗೌಡರು, ಜಿಲ್ಲಾ ನಾಯಕರಿಗೆ ಕೆಲವೊಂದು ಸೂಚನೆ ನೀಡಿದ್ದಾರೆ.
ಸಿ.ಎಂ.ಇಬ್ರಾಹಿಂ ಹಾಗೂ ಎಚ್.ಡಿ.ಕುಮಾರಸ್ವಾಮಿ ಒಂದು ವಾರ, ಎಚ್.ಡಿ.ದೇವೇಗೌಡರು ಒಂದು ವಾರ ಕೋಲಾರದಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳುವುದು. ಕೋಲಾರ ಕ್ಷೇತ್ರದ ಚುನಾವಣ ಉಸ್ತುವಾರಿಗಾಗಿ ಪ್ರತ್ಯೇಕವಾಗಿ ತಂಡ ರಚಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಅಲ್ಪಸಂಖ್ಯಾಕರ ವಿರೋಧ?
ರಾಮನಗರದಲ್ಲಿ ಕಾಂಗ್ರೆಸ್ ಈಗಾಗಲೇ ಇಕ್ಬಾಲ್ ಹುಸೇನ್‌ಗೆ ಕೆಲಸ ಮಾಡುವಂತೆ ಸೂಚಿಸಿದೆ. ಈ ಹಂತದಲ್ಲಿ ಅವರಿಗೆ ಟಿಕೆಟ್ ತಪ್ಪಿಸಿದರೆ ಅಲ್ಪಸಂಖ್ಯಾಕರ ವಿರೋಧಕ್ಕೂ ಕಾರಣವಾಗಬಹುದು ಎಂಬ ಆತಂಕವೂ ಇದೆ. ಬಿಜೆಪಿಯ ಪರಿಷತ್ ಸದಸ್ಯ ಸಿ.ಪಿಯೋಗೇಶ್ವರ್ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು ಅದು ಸಾಧ್ಯವಾಗದಿದ್ದರೆ ಕಾಂಗ್ರೆಸ್‌ನಿಂದ ಚನ್ನಪಟ್ಟಣಕ್ಕೆ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
-ಎಸ್.ಲಕ್ಷ್ಮೀನಾರಾಯಣ