ಕಲಬುರಗಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೆ ಕಲಬುರಗಿ ಶರಣಬಸವೇಶ್ವರನಿಗೆ ದೀರ್ಘದಂಡ ನಮಸ್ಕಾರ ಹಾಕುವುದು ಹಾಗೂ 101 ಟೆಂಗಿನ ಕಾಯಿ ಒಡೆಯುವುದಾಗಿ ಹರಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ ಹಾಗೂ ಭವಾನಿಕುಮಾರ ವಳಕೇರಿಯವರು ದೀರ್ಘದಂಡ ನಮಸ್ಕಾರ ಹಾಕಿದರು.
ನಂತರ ಮಾತನಾಡಿದ ದೇವೇಗೌಡ ತೆಲ್ಲೂರ, ರಾಜ್ಯದ ಜನರು ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿತ್ತು. ಅದೇ ರೀತಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಬಡವರಿಗಾಗಿ ದೀನ, ದಲಿತರ, ಹಿಂದುಳಿದವರ, ರೈತರ ಪರವಾಗಿ ಕೆಲಸ ಮಾಡುವ ಗುಣವುಳ್ಳವರಾಗಿದ್ದಾರೆ ಎಂದರು.
ಸುಮಾರು ವರ್ಷಗಳಿಂದ ಜೆಡಿಎಸ್ನಲ್ಲಿ ಕೆಲಸ ಮಾಡುತ್ತಿದ್ದು, ಜಿಲ್ಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗ ಕಟ್ಟಿ ಅನೇಕ ಹೋರಾಟ ಮಾಡಿ ಜನರ ಸಮಸ್ಯೆ ಪರಿಹರಿಸಿದ್ದೇವೆ. ಮುಂದಿನ ದಿನಗಳಲ್ಲಿ ಬಳಗದ ವತಿಯಿಂದ ಜನರ ಸೇವೆ ಮಾಡುತ್ತೇವೆ ಎಂದರು.
ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಆಡಳಿತ ನಡೆಸಿ, ರೈತರಿಗೆ ಅನೇಕ ಹೊಸ ಯೋಜನೆಗಳನ್ನು ನೀಡುವುದಷ್ಟೇ ಅಲ್ಲ, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿ, ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಾರೆಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್, ಮನೋಹರ ಪೋದ್ದಾರ, ದಿಲೀಪ ಹೊಡಲ್, ಮಹ್ಮದ ಖುರೇಷಿ,
ಶಿವಾನಂದ ದ್ಯಾಮಗೊಂಡ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.