ಬೆಂಗಳೂರು: ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿಯವರು ಮಂಗಳವಾರ ದಿಢೀರ್ ದೆಹಲಿ ಪ್ರವಾಸ ರದ್ದುಗೊಳಿಸಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಸಮಾಲೋಚನೆ ನಡೆಸಿದರು. ದೆಹಲಿಯಲ್ಲಿ ಬಿಜೆಪಿಯೇತರ ಪಕ್ಷಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಬೇಕಿದ್ದ ಕುಮಾರಸ್ವಾಮಿ ಬೆಳಗ್ಗೆ ಪ್ರವಾಸ ರದ್ದುಪಡಿಸಿ ಪಕ್ಷದ ಶಾಸಕರ ಜತೆ ಆಂತರಿಕ ಸಮಾಲೋಚನೆ ನಡೆಸಿ ನಂತರ ಪದ್ಮನಾಭನಗರದಲ್ಲಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ರೋಷನ್‌ಬೇಗ್ ಹೇಳಿಕೆ, ಅದರಿಂದ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ತಲ್ಲಣ, ಬಿಜೆಪಿಯ ಆಪರೇಷನ್ ಕಮಲ ಪ್ರಯತ್ನ, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಎದುರಾಗಬಹುದಾದ ಸನ್ನಿವೇಶಗಳ ಬಗ್ಗೆ ದೇವೇಗೌಡರ ಜತೆ ಚರ್ಚಿಸಿದ ಕುಮಾರಸ್ವಾಮಿ, ಅಲ್ಲಿಂದಲೇ ಕಾಂಗ್ರೆಸ್ ಹೈಕಮಾಂಡ್ ಜತೆಗೂ ದೂರವಾಣಿ ಮೂಲಕ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ಕೆಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿರುವ ಬಗ್ಗೆಯೂ ಗುಪ್ತದಳ ಮಾಹಿತಿಯಿದ್ದು ಫಲಿತಾಂಶ ಹೊರಬಿದ್ದ ದಿನವೇ ಕೆಲವರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಅದರ ಬಗ್ಗೆ ದೇವೇಗೌಡರ ಜತೆ ಮಾತನಾಡಿದರು ಈ ಸಂದರ್ಭದಲ್ಲಿ ದೇವೇಗೌಡರು ಕೆಲವು ಸಲಹೆ ನೀಡಿದರು ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಿದ್ದ ಕುಮಾರಸ್ವಾಮಿಯವರು ನಂತರ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವಿತ್ತು. ಆದರೆ, ರಾಹುಲ್ಗಾಂಧಿಯವರು ನೀವು ದೆಹಲಿಗೆ ಬರುವುದು ಬೇಡ, ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಬರಲಿದ್ದು ನಿಮ್ಮ ಜತೆ ಚರ್ಚಿಸಲಿದ್ದಾರೆ. ನೀವು ಬೆಂಗಳೂರಿನಲ್ಲೇ ಇದ್ದು ಶಾಸಕರು ಬಿಜೆಪಿಯತ್ತ ಹೋಗದಂತೆ ನಿಗಾ ವಹಿಸಿ ಎಂದು ಸೂಚನೆ ನೀಡಿದರು. ಹೀಗಾಗಿ, ದೆಹಲಿ ಪ್ರವಾಸ ರದ್ದಗೊಂಡಿತು ಎಂದು ಹೇಳಲಾಗಿದೆ.
ತಂತ್ರನಾ?: ಮತ್ತೂಂದು ಮೂಲದ ಪ್ರಕಾರ, ದೆಹಲಿಯಲ್ಲಿ ಬಿಜೆಪಿ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ದೆಹಲಿ ಪ್ರವಾಸ ರದ್ದುಗೊಳಿಸಲಾಯಿತು ಎಂದು ತಿಳಿದು ಬಂದಿದೆ. ಕುಮಾರಸ್ವಾಮಿ ದೆಹಲಿ ಪ್ರವಾಸ ರದ್ದುಪಡಿಸಿದ್ದರಿಂದ ಜೆಡಿಎಸ್ ಕಾಂಗ್ರೆಸ್ ಸಂಬಂಧ ಕಡಿದುಕೊಂಡು ಬಿಜೆಪಿ ಜತೆ ಹೋಗಬಹುದು ಎಂಬ ಗುಸು ಗುಸು ಪ್ರಾರಂಭವಾಗಿದೆ. ಆದರೆ, ಜೆಡಿಎಸ್ ಮೂಲಗಳು ಇದನ್ನು ನಿರಾಕರಿಸಿವೆ.