ಮುಂಬಯಿ : ಕಳೆದ ಭಾನುವಾರ ಶವವಾಗಿ ಪತ್ತೆಯಾಗಿದ್ದ ಎಚ್ ಡಿ ಎಫ್ ಸಿ ಬ್ಯಾಂಕ್ ಉಪಾಧ್ಯಕ್ಷ ಸಿದ್ಧಾರ್ಥ ಸಾಂಘವಿ ಅವರ ಕೊಲೆ ರಹಸ್ಯ ಬಯಲಾಗಿದ್ದು, ಕೇವಲ 30 ,000 ರೂಪಾಯಿಗಾಗಿ ಹತ್ಯೆಗೈಯಲಾಗಿರುವ ಕುರಿತು ತನಿಖೆಯಲ್ಲಿ ತಿಳಿದು ಬಂದಿದೆ.
ಹತ್ಯೆ ಸಂಬಂಧ ಪೊಲೀಸರು ಬಂಧಿಸಿರುವ 20ರ ಹರೆಯದ ಆರೋಪಿ ಸರ್ಫರಾಜ್ ಶೇಖ್ ಅಲಿಯಾಸ್ ರಾಯಿಸ್ ಈ ವಿಚಾರನ್ನು ಬಾಯ್ಬಿಟ್ಟಿದ್ದಾನೆ,ಆತನ ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
39ರ ಹರೆಯದ ಸಾಂಘವಿ ಅವರು ಸೆ.5ರ ಗುರುವಾರದಂದು ಇಲ್ಲಿನ ಕಮಲಾ ಮಿಲ್ಸ್ ಕಚೇರಿಯಿಂದ ನಾಪತ್ತೆಯಾಗಿದ್ದರು. ಎನ್‌ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು.
ಬಂಧಿತ ಶೇಖ್ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದು, 30,000 ರೂಪಾಯಿ ಸಾಲ ಮರು ಪಾವತಿಯ ಇಎಮ್‌ಐಗಾಗಿ ಕೊಲೆಗೈದಿರುವುದಾಗಿ ಹೇಳಿಕೊಂಡಿದ್ದಾನೆ.
ಸಾಂಘಅವರು ನಾಪತ್ತೆಯಾದ ದಿನ ಮನೆಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿದ್ದು ನಿಮ್ಮ ಮಗ ಸುರಕ್ಷಿತವಾಗಿದ್ದು ಚಿಂತೆ ಮಾಡಬೇಡಿ ಎಂದಿದ್ದ. ಈ ಕರೆ ಸಾಂಘವಿ ಅವರ ಮೊಬೈಲ್‌ನಿಂದ ಮಾಡಲಾಗಿತ್ತು, ಆದರೆ ಬೇರೆ ಸಿಮ್ ಕಾರ್ಡ್ ಬಳಸಲಾಗಿತ್ತು.
ಮೊಬೈಲ್ ಕರೆಯ ಜಾಡನ್ನು ಬೆನ್ನಟ್ಟಿದ ಪೊಲೀಸರು ಪ್ರಕರಣವನ್ನು ಕೂಡಲೇ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.