ಹೊಸದಿಲ್ಲಿ: ಎಲ್ಲಾ ವ್ಯಾಪಾರ ವಹಿವಾಟುವಿಗೂ ಆನ್‌ಲೈನ್ ಪೇಮೆಂಟ್ ಮೊರೆಹೋಗುತ್ತಿರುವ ಜನರಿಗೆ ಕಳೆದ 2 ದಿನಗಳಿಂದ ಪೀಕಲಾಟ ಶುರುವಾಗಿದೆ. ಸರ್ವರ್ ಡೌನ್ ಸಮಸ್ಯೆಯಿಂದ ಗ್ರಾಹಕರು ಬ್ಯಾಂಕಿನ ಮೊಬೈಲ್ ಆ್ಯಪ್ ಬಳಸಲು ಆಗದೆ ಪರದಾಡುತ್ತಿದ್ದಾರೆ.
ಖಾಸಗಿ ವಲಯದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಗ್ರಾಹಕರಿಗೆ ಎರಡು ದಿನದಿಂದ ಸರ್ವರ್ ಡೌನ್‌ನ ತಾಂತ್ರಿಕ ದೋಷ ಎದುರಾಗಿದ್ದು, ವ್ಯಾಪಾರ ವಹಿವಾಟು ಚಟುವಟಿಕೆಗಳಿಗೆ ತೊಂದರೆಯುಂಟಾಗುತ್ತಿದೆ.
ಡಿಸೆಂಬರ್ 2ರ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಆಡಳಿತ ಸಂಸ್ಥೆ ವಿಫಲವಾಗಿದ್ದು, ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಪರಿಣಾಮ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಇನ್ನೂ ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಹೆಚ್.ಡಿ.ಎಫ್.ಸಿ., ಸವರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ನಮ್ಮ ಗ್ರಾಹಕರಿಗೆ ಲಾಗಿನ್ ಆಗಲು ಸಾಧ್ಯವಾಗಿಲ್ಲ. ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ನಮ್ಮ ತಾಂತ್ರಿಕ ಪರಿಣಿತರು ರಿಪೇರಿ ಕಾರ್ಯದಲ್ಲಿ ತೊಡಗಿದ್ದು, ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಗ್ರಾಹಕರಿಗೆ ಆಗಿರುವ ತೊಂದರೆ ಬಗ್ಗೆ ವಿಷಾದಿಸುತ್ತೇವೆ ಎಂದಿದ್ದಾರೆ.
2019ನೇ ಸಾಲಿನ ಏಷ್ಯಾಮನಿಯ ಶ್ರೇಷ್ಠ ಬ್ಯಾಂಕ್ ಪ್ರಶಸ್ತಿ, ಶ್ರೇಷ್ಠ ಡಿಜಿಟಲ್ ಬ್ಯಾಂಕ್ ಪ್ರಶಸ್ತಿಯನ್ನು ಗಳಿಸಿದ್ದು, ಈಗಿನ ಸೇವೆಯಲ್ಲಿ ಕಂಡುಬಂದ ಸಮಸ್ಯೆಯ ಬಗ್ಗೆ ಗ್ರಾಹಕರು ಕಿಡಿಕಾರಿದ್ದಾರೆ.