ಬೆಂಗಳೂರು: ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟ ನಿರ್ಣಯಗಳಲ್ಲಿ ಕೈಯಾಡಿಸಲು ಪ್ರಾರಂಭಿಸಿದ್ದೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ವಿರಸದ ಗೆರೆ ತಾತ್ಕಾಲಿಕವಾಗಿ ಅಳಿಸುವುದಕ್ಕೆ ಕಾರಣವಾಗಿದೆಯೇ ?
ಹೌದು ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು. ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಪರವಾಗಿ ಹೈಕಮಾಂಡ್ ಹಂತದವರೆಗೂ ತೆರಳಿ ಖರ್ಗೆ ಬ್ಯಾಟಿಂಗ್ ನಡೆಸುತ್ತಿರುವುದು ಇವರಿಬ್ಬರ ಆತಂಕಕ್ಕೆ ಕಾರಣವಾಗಿದೆ. ಖರ್ಗೆ ಆಗಮನದಿಂದ ಕಾಂಗ್ರೆಸ್ ನ ಲೆಕ್ಕಾಚಾರಗಳು ಬೇರೆ ದಿಕ್ಕು ಪಡೆಯಬಹುದೆಂಬ ಕಾರಣಕ್ಕೆ ಇಬ್ಬರೂ ವೈಮನಸ್ಸು ಮರೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಕಾರಣವೂ ಸಾಕಷ್ಟಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಧ್ಯೆ ಉತ್ತಮ ಸಂಬಂಧವಿದೆ. ಖುದ್ದು ದೇವೇಗೌಡರೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆ ಮಾಡಿ ಎರಡನೇ ಅಭ್ಯರ್ಥಿ ವಾಪಾಸ್ ತೆಗೆಯುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ಖರ್ಗೆ ಅವರು ವಂಚಿತರಾದ ಬಗ್ಗೆಯೂ ಗೌಡರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜತೆಗೆ, ಮುಂಬರುವ ವಿಧಾನಸಭೆ ಚುನಾವಣೆಯ ಫಲಿತಾಂಶ ಅತಂತ್ರವಾಗುವ ಸಾಧ್ಯತೆಯೇ ಹೆಚ್ಚು, ಹೀಗೇನಾದರೂ ಆದಲ್ಲಿ ಕಾಂಗ್ರೆಸ್ ಗೆ ನಿಮ್ಮ ಪರವಾಗಿ ಬೆಂಬಲ ನೀಡಲು ಜೆಡಿಎಸ್ ಸದಾ ಸಿದ್ಧವಾಗಿರುತ್ತದೆ ಎಂದು ನೇರ ಭರವಸೆಯನ್ನು ನೀಡಿದರು ಎನ್ನಲಾಗಿದೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಭಾರೀ ದುರಂತ: ವೋಲ್ವೋ ಬಸ್ಸಿಗೆ ಬೆಂಕಿ, ಹಲವರ ಸಜೀವ ದಹನ
ಈ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಎಚ್ಚೆತ್ತ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬಣದ ನಾಯಕರು ತಮ್ಮ ನಾಯಕರಿಗೆ ಬೆನ್ನು ಬಿದ್ದು ಇಬ್ಬರು ಪರಸ್ಪರ ನೇರಾನೇರ ಮಾತನಾಡುವಂತೆ ಮನವೊಲಿಸಿದ್ದಾರೆ. ಇದರ ಫಲವಾಗಿಯೇ ಗುರುವಾರ ನವ ಚೈತನ್ಯ ಸಭೆಯ ವೇಳೆ ಉಭಯ ನಾಯಕರು ಮಾತುಕತೆ ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗೂಡೋಣ. ಜತೆಗೆ, ನಮ್ಮಿಬ್ಬರ ಭಿನ್ನಮತದ ಲಾಭವನ್ನು ಪಡೆಯಲು ಯಾವುದೇ ಮೂರನೇ ವ್ಯಕ್ತಿಗೆ ಅವಕಾಶ ನೀಡುವುದು ಬೇಡ ಎಂದು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.