Advertisement

ಮದ್ದಾನೆಗಳ ಪಟ್ಟು;ನಾಯಕರಿಗೆ ಇಕ್ಕಟ್ಟು:ಮೂರು ಕ್ಷೇತ್ರಗಳ ಸಂಕಷ್ಟ

12:30 AM Mar 06, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಯಾಗಲು ದಿನಗಣನೆಯಾಗುತ್ತಿದ್ದರೂ, ಸ್ಥಾನ ಹಂಚಿಕೆಗಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಜಿದ್ದಾಜಿದ್ದಿ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಮೈಸೂರು, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಎರಡೂ ಪಕ್ಷಗಳು ಪಟ್ಟು ಹಿಡಿದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ.

Advertisement

ಸೋಮವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್‌ಗೆ 6-7 ಸ್ಥಾನ ಬಿಟ್ಟುಕೊಡುವುದಾಗಿ ಕಾಂಗ್ರೆಸ್‌ ಪ್ರಸ್ತಾಪಿಸಿರುವ ಬೆನ್ನಲ್ಲೇ, ಮೈಸೂರು ಕ್ಷೇತ್ರ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಠ ಹಿಡಿದಿದ್ದಾರೆ. ಇನ್ನೊಂದೆಡೆ, ಸದ್ಯ ಕಾಂಗ್ರೆಸ್‌ ಸಂಸದರಿರುವ ತುಮಕೂರು ಅಥವಾ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಬಿಟ್ಟುಕೊಡಿ ಎಂದು ದೇವೇಗೌಡರು ಬೇಡಿಕೆ ಇಟ್ಟಿರುವುದು ಹೈಕಮಾಂಡ್‌ಗೆ ಇಕ್ಕಟ್ಟಿನ ಸ್ಥಿತಿ ಎದುರಿಸುವಂತಾಗಿದೆ. ಅತ್ತ ಸಿದ್ದರಾಮಯ್ಯ ವಿರೋಧದ ನಡುವೆ ಸೀಟು ಹಂಚಿಕೆ ಮಾಡುವಂತಿಲ್ಲ, ಇತ್ತ ದೇವೇಗೌಡರ ಮಾತಿಗೆ ಮನ್ನಣೆನೀಡ ದಿರುವಂತೆಯೂ ಇಲ್ಲ ಎಂಬ ಸ್ಥಿತಿ ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ನಾಯಕರಿಗೆ ಎದುರಾಗಿದೆ.

ಮೊದಲಿಗೆ ಕಾಂಗ್ರೆಸ್‌-ಜೆಡಿಎಸ್‌ ಗೆದ್ದಿರುವ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳ ಹಂಚಿಕೆ ಎಂಬ ಸೂತ್ರ ಮುಂದಿಟ್ಟು ನಂತರ ಇದೀಗ ಆ ಕ್ಷೇತ್ರ ಸಾಧ್ಯವಿಲ್ಲ, ಈ ಕ್ಷೇತ್ರ ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ತಗಾದೆ ತೆಗೆದಿದ್ದಾರೆ. 12 ಕ್ಷೇತ್ರ ಕೇಳುತ್ತಿರುವ ಜೆಡಿಎಸ್‌ಗೆ ಎಲ್ಲ ಕಡೆ ಸಮರ್ಥ ಅಭ್ಯರ್ಥಿಗಳು ಇಲ್ಲ ಎಂಬ ವಾದ ಮುಂದಿಡುತ್ತಿದ್ದಾರೆ ಎನ್ನಲಾಗಿದೆ.

ಸಮನ್ವಯ ಸಮಿತಿಗೆ ಹಾಜರಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ “ನೀವೆಲ್ಲಾ ಮಾತನಾಡಿ ಒಂದು ತೀರ್ಮಾನಕ್ಕೆ
ಬನ್ನಿ’ ಎಂದು ಹೇಳಿ ಹದಿನೈದು ನಿಮಿಷದಲ್ಲೇ ನಿರ್ಗಮಿಸಿದರು. ಆ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಜೆಡಿಎಸ್‌ಗೆ ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ, ವಿಜಯಪುರ ಕ್ಷೇತ್ರ ಬಿಟ್ಟುಕೊಡಲು ಒಪ್ಪಿಗೆ ಸಿಕ್ಕಿದೆಯಾದರೂ ಮೈಸೂರು ಕ್ಷೇತ್ರ ಬಿಟ್ಟುಕೊಡಲು ಒಪ್ಪದಿರುವುದು ಜೆಡಿಎಸ್‌ ಸಿಟ್ಟಿಗೆ ಕಾರಣವಾಗಿದೆ.

ಕಾಂಗ್ರೆಸ್‌ ಗೆಲುವು ಸಾಧಿಸಿರುವ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಕ್ಷೇತ್ರಗಳಿಗೂ ಜೆಡಿಎಸ್‌ ಬೇಡಿಕೆ ಇಟ್ಟಿತ್ತಾದರೂ ಅದೂ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜೆಡಿಎಸ್‌ ಇದೀಗ ತುಮಕೂರು ಅಥವಾ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ರಾಹುಲ್‌ಗಾಂಧಿ ಬಳಿ ಬೇಡಿಕೆ ಇಡಲು ಮುಂದಾಗಿದೆ. ದೇವೇಗೌಡರು ಹಾಗೂ ರಾಹುಲ್‌ಗಾಂಧಿಯವರ ನಡುವೆ ಮಾತುಕತೆ ವೇಳೆ ಬಹುತೇಕ ಜೆಡಿಎಸ್‌ಗೆ 8 ಹಾಗೂ ಕಾಂಗ್ರೆಸ್‌ ಗೆ 20 ಕ್ಷೇತ್ರ ಹಂಚಿಕೆಯಾಗಬಹುದು. ತೀರಾ ಗೌಡರು ಹಠಕ್ಕೆ ಬಿದ್ದರೆ 9 ಸ್ಥಾನ ಸಿಗಬಹುದು. ಸಿದ್ದರಾಮಯ್ಯ ಅವರ ಹಠ, ದೇವೇಗೌಡರ ಬೇಡಿಕೆ ಎರಡೂ ಆಲಿಸಿರುವ ಹೈಕಮಾಂಡ್‌ ಒಂದು ಸೂತ್ರ ಸಿದಟಛಿಪಡಿಸಿಕೊಂಡಿದ್ದು ರಾಹುಲ್‌ಗಾಂಧಿ ಜತೆಗಿನ ಮಾತುಕತೆ ಸಂದರ್ಭದಲ್ಲಿ ಪ್ರಸ್ತಾಪವಾಗಲಿದೆ.

Advertisement

ಹಿಂದುಳಿದ ವರ್ಗದವರಿಗೆ ಅವಕಾಶ?: ಬೆಂಗಳೂರು ಉತ್ತರದಲ್ಲಿ ದೇವೇಗೌಡ, ಮಂಡ್ಯದಲ್ಲಿ ನಿಖೀಲ್‌, ಹಾಸನದಲ್ಲಿ ಪ್ರಜ್ವಲ್‌ ಕಣಕ್ಕಿಳಿದರೆ ತುಮಕೂರು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಹಿಂದುಳಿದ ವರ್ಗದ ಅಭ್ಯರ್ಥಿಗೆ ಅವಕಾಶ ಕಲ್ಪಿಸುವ ಚಿಂತನೆಯೂ ಜೆಡಿಎಸ್‌ನಲ್ಲಿದೆ. ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಆಕಾಂಕ್ಷಿಯಾಗಿದ್ದಾರೆ. ಜತೆಗೆ, ಎಂ.ಟಿ.ಕೃಷ್ಣಪ್ಪ, ಎಚ್‌.ನಿಂಗಯ್ಯ ಟಿಕೆಟ್‌ ಕೇಳುತ್ತಿದ್ದಾರೆ.

ಇಂದು ರಾಹುಲ್‌ ಭೇಟಿ? 
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಂಗಳವಾರ ದೆಹಲಿಗೆ ತೆರಳಿದ್ದು ಬುಧವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಜತೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸುವ ಸಾಧ್ಯತೆಯಿದೆ. ರಾಹುಲ್‌ ಗಾಂಧಿಯವರು ದೆಹಲಿಯಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಉಪಾಹಾರಕ್ಕೆ ಆಗಮಿಸಲಿದ್ದಾರೆ. ಅಲ್ಲೇ ಸೀಟು ಹಂಚಿಕೆ ಮಾತುಕತೆ ನಡೆಯಲಿದೆ ಎಂದು ಹೇಳಲಾಗಿದೆ. ಈ ಮಧ್ಯೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಮಂಗಳವಾರ ಸಂಜೆ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಸೋಮವಾರ ಸಮನ್ವಯ ಸಮಿತಿ ಸಭೆಯಲ್ಲಿ ನಡೆದ ಮಾತುಕತೆ ವಿವರಗಳನ್ನು ದೇವೇಗೌಡರಿಗೆ ನೀಡಿದರು ಎಂದು ಹೇಳಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯ ಮತಗಳಿಕೆ ಆಧಾರದ ಮೇಲೆ ಹಾಗೂ ಪ್ರಸ್ತುತ ಪಕ್ಷದ ಸಾಮರ್ಥ್ಯ ಪರಿಗಣಿಸಿ
ಸೀಟು ಹಂಚಿಕೆಯಾಗಲಿ ಎಂದು ಕುಮಾರಸ್ವಾಮಿ ದೇವೇಗೌಡರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next