ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸೋಮವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಪದ್ಮನಾಭನಗರ ನಿವಾಸದಲ್ಲಿ ಭೇಟಿ ಮಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಸೋಲು, ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಡಾ.ಕೆ.ಸುಧಾಕರ್ ಅವರು ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿರುವ ಹಿಂದಿನ ಕಾರ್ಯತಂತ್ರ, ಬಿಜೆಪಿ ಆಪರೇಷನ್ ಕಮಲ ಪ್ರಯತ್ನ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ನಾಯಕರ ನಡುವೆ ಹೊಂದಾಣಿಕೆ ಕೊರತೆಯಿಂದಲೇ ಸೋಲು ಉಂಟಾಯಿತು ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಒಂದು ವರ್ಷದಿಂದ ಬರೀ ಗೊಂದಲವೇ ಆಗಿದೆ. ಬಿಜೆಪಿ ಜತೆ ಕೆಲವು ಶಾಸಕರು ನಿತ್ಯ ಸಂಪರ್ಕದಲ್ಲಿದ್ದಾರೆ. ಇದೇ ರೀತಿ ಮುಂದುವರಿದರೆ ಸರ್ಕಾರ ನಡೆಸುವುದು ಹೇಗೆ? ಚುನಾವಣೆಯಲ್ಲಂತೂ ಕಾಂಗ್ರೆಸ್‌ನಿಂದ ಸಹಕಾರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡೂ ಪಕ್ಷಗಳ ಶಾಸಕರ ಜತೆ ಸಮಾಲೋಚನೆ ನಡೆಸಿ ನಿರಂತರವಾಗಿ ಸಂಪರ್ಕ ಹೊಂದಿದರೆ ಯಾವುದೇ ಸಮಸ್ಯೆಯಾಗದು. ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆಯಲು ಎರಡೂ ಪಕ್ಷಗಳು ಸಮನ್ವಯತೆಯಿಂದ ಹೋಗಬೇಕಾಗಿದೆ. ಜೆಡಿಎಸ್ ಶಾಸಕರು ಹಾಗೂ ನಾಯಕರಿಗೆ ನೀವು ಹೇಳಿ, ಕಾಂಗ್ರೆಸ್ ಶಾಸಕರು ಹಾಗೂ ನಾಯಕರಿಗೆ ನಮ್ಮ ಕಡೆಯಿಂದ ಹೇಳುತ್ತೇವೆ ಎಂದು ಹೇಳಿದರು ಎಂದು ತಿಳಿದುಬಂದಿದೆ.
ದೇವೇಗೌಡರ ಭೇಟಿಯ ನಂತರ ಮಾತನಾಡಿದ ದಿನೇಶ್ , ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆಯೂ ಚರ್ಚಿಸಿದ್ದೇವೆ. ಸಮ್ಮಿಶ್ರ ಸರ್ಕಾರ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡುವ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ.
ಸಂಪುಟ ವಿಸ್ತರಣೆ ಕುರಿತು ಅಧಿಕೃತ ನಿರ್ಧಾರವಾದಾಗ ನಿಮಗೆ ಮಾಹಿತಿ ನೀಡಲಾಗುವುದು ಎಂದು ಪ್ರಶ್ನೆಯೊಂದಕಗೆ ಉತ್ತರಿಸಿದರು. ಆಪರೇಷನ್ ಕಮಲ ಡೆಡ್‌ಲೈನ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು.