ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಪ್ರಕರಣ ಬೆಳಕಿಗೆ ಬಂದ ಬಳಿಕ ಮೈಸೂರಿನಲ್ಲಿ ದಾಖಲಾಗಿರುವ ಮಹಿಳೆಯ ಅಪಹರಣ ಪ್ರಕರಣದ ಮೊದಲನೇ ಆರೋಪಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು 17 ನೇ ಎಸಿಎಂಎಂ ನ್ಯಾಯಾಧೀಶರು ಭಾನುವಾರ ಹೆಚ್ಚಿನ ವಿಚಾರಣೆಗೆ 4 ದಿನ ಎಸ್ ಐಟಿ (ವಿಶೇಷ ತನಿಖಾ ತಂಡ) ಕಸ್ಟಡಿಗೆ ನೀಡಿದೆ.
ಶನಿವಾರ ರಾತ್ರಿ ಬಂಧನಕ್ಕೊಳಗಾಗಿದ್ದ ರೇವಣ್ಣ ಅವರ ವೈದ್ಯಕೀಯ ತಪಾಸಣೆ ಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ನಡೆಸಿದ ಬಳಿಕ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಗೆ ಕರೆದೊಯ್ಯಲಾಯಿತು.
ನ್ಯಾ.ರವೀಂದ್ರಕುಮಾರ್ ಬಿ.ಕಟ್ಟಿಮನಿ ಅವರ ಮುಂದೆ ಹಾಜರುಪಡಿಸಲಾಗಿದ್ದು, ಪ್ರಾಥಮಿಕ ತನಿಖೆ ಹಾಗೂ ಸಾಕ್ಷ್ಯಾಧಾರಗಳನ್ನು ಆಧರಿಸಿ ಜಾಮೀನು ನಿರಾಕರಿಸಿ, ಮೇ 8 ರ ವರೆಗೆ ಎಸ್ ಐಟಿ ಕಸ್ಟಡಿಗೆ ನೀಡಲಾಗಿದೆ.
ರಾಜಕೀಯ ಪಿತೂರಿ
ನನ್ನ ಮೇಲೆ ಮತ್ತು ಪುತ್ರ ಪ್ರಜ್ವಲ್ ಲೈಂಗಿಕ ಕಿರುಕುಳ ನೀಡಿ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ನನ್ನ ಬಂಧನವಾಗಿರುವುದು ರಾಜಕೀಯ ಪಿತೂರಿ ಎಂದು ರೇವಣ್ಣ ಹೇಳಿದ್ದಾರೆ.
”ಮೇ 2ರಂದು ದಾಖಲಾದ ದೂರಿಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ. ಇದೊಂದು ದೊಡ್ಡ ರಾಜಕೀಯ ಷಡ್ಯಂತ್ರ.ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ರೇವಣ್ಣ ಬೌರಿಂಗ್ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಮೂರು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ಅಪಹರಿಸಿ ಅಕ್ರಮ ಬಂಧನದಲ್ಲಿರಿಸಿದ ಆರೋಪ ರೇವಣ್ಣ ಎದುರಿಸುತ್ತಿದ್ದಾರೆ. ಗುರುವಾರ ಮಹಿಳೆಯ ಮಗ ದೂರು ದಾಖಲಿಸಿದ ಬಳಿಕ ಶನಿವಾರ ರೇವಣ್ಣ ಅವರನ್ನು ಎಸ್ ಐಟಿ ಬಂಧಿಸಿತ್ತು.