ಹಾಸನ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 5 ವಿದ್ಯುತ್ ಸರಬರಾಜು ಕಂಪನಿಗಳು 7,996 ಕೋಟಿ ರೂ. ನಷ್ಟದಲ್ಲಿದ್ದು, ಸರಿದೂಗಿಸಿಕೊಳ್ಳಲು ಪ್ರತಿ ಯೂನಿಟ್‌ಗೆ 40 ಪೈಸೆ ಹೆಚ್ಚಳಕ್ಕೆ ವಿದ್ಯುತ್ ಸರಬರಾಜುಕಂಪನಿಗಳು ಕೆಇಆರ್‌ಸಿಗೆ ಮನವಿ ಸಲಿಸಿದ್ದವು. ಕೆಇಆರ್‌ಸಿ ಯೂನಿಟ್‌ಗೆ 40 ಪೈಸೆ ವರೆಗೂ ಹೆಚ್ಚಳಕ್ಕೆ ಅನುಮತಿ ನೀಡಿದೆ. ಕೊರೊನಾ ಆರಂಭವಾದ ಸಂದರ್ಭದಲ್ಲಿ ಒಮ್ಮೆ, ಈಗ ಮತ್ತೂಮ್ಮೆ ದರ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೊರ ಹೊರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಾಕ್‌ಡೌನ್‌ನಿಂದ ಜನರು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅತಿವೃಷ್ಟಿಯಿಂದ ರೈತರು ಬೆಳೆ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಗೂ ವಿಧಾನಸಭೆಯ 2 ಕ್ಷೇತ್ರಗಳ ಉಪಚುನಾವಣೆ ಹಾಗೂ ಮೇಲ್ಮ ನೆಯ ಚುನಾವಣೆ ಮುಗಿದ ತಕ್ಷಣ ವಿದ್ಯುತ್ ದರ ಏರಿಕೆ ಮಾಡಿ ಜನರಿಗೆ ಸರ್ಕಾರ ಬರೆ ಹಾಕುತ್ತಿದೆ.ಈಗ ರೈತರು,ಬಡವರು ವಿದ್ಯುತ್ ದರ ಪಾವತಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ ದರ ಏರಿಕೆ ಆದೇಶ ತಕ್ಷಣ ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.
ಎರಡು ಸರ್ಕಾರ ಅಧಿಕಾರ ನಡೆಸುವುದರೊಳಗೆ 10 ಬಾರಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಇಷ್ಟೊಂದು ದರ ಏರಿಕೆ ಮಾಡಿದ್ದರೂರೈತರಿಗೆಗುಣಮಟ್ಟದವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ನಾನು ಇಂಧನ ಸಚಿವ ನಾಗಿದ್ದ 38 ತಿಂಗಳು ಒಮ್ಮೆಯೂ ವಿದ್ಯುತ್ ದರ ಏರಿಕೆ ಮಾಡಿರಲಿಲ್ಲ. ಬೆಸ್ಕಾಂನಲ್ಲಿ 600 ಕೋಟಿ ರೂ. ಉಳಿತಾಯ ಮಾಡಿ ಅದನ್ನು ನಿಶ್ಚಿತ ಠೇವಣಿ ಇರಿಸಿದ್ದೆ ಎಂದು ಹೇಳಿದರು.
ಖಾಸಗೀಕರಣ: ರಾಜ್ಯದಲ್ಲಿ ವಿದ್ಯುತ್ ಉಪ ಕೇಂದ್ರಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ದಿಂದ 1200 ಕೋಟಿ ರೂ. ಅನುದಾನ ತಂದು ರಾಜ್ಯದಲ್ಲಿ 600ಕ್ಕೂ ಹೆಚ್ಚು ಉಪ ಕೇಂದ್ರ ನಿರ್ಮಿಸಿದ್ದೆ. ಆದರೆ, ಈಗ ಇಂಧನ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ. ಇಲಾ ಖೆಯ ಲ್ಲಿನ 10 ವರ್ಷಗಳ ವ್ಯವಹಾರದ ಸಮಗ್ರ ತನಿಖೆ ನಡೆಯಬೇಕು. ಆಗ ಏನೇನು ನಡೆದಿದೆ ಎಂಬುದು ಗೊತ್ತಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ವಿಮಾನ ನಿಲ್ದಾಣ ಗಳ ನಿರ್ವಹಣೆಯನ್ನು ಅದಾನಿ ಕಂಪನಿಗೆ ವಹಿಸಿದಂತೆ ವಿದ್ಯುತ್ ಸರಬರಾಜು ಕಂಪನಿಗಳನ್ನೂ ಖಾಸಗೀಕರಣ ಮಾಡುವ ಸ್ಥಿತಿ ಬರಬಹುದು ಎಂದು ರೇವಣ್ಣ ಆತಂಕ ವ್ಯಕ್ತಪಡಿಸಿದರು.
ಪಸೆಂಟೇಜ್ ವ್ಯವಹಾರ: ಜಲಸಂಪನ್ಮೂಲ ಇಲಾಖೆಯಲ್ಲಿ ಪರ್ಸೆಂಟೇಜ್ ವ್ಯವಹಾರ ದಿನೇ ದಿನೆ ಹೆಚ್ಚಳವಾಗುತ್ತಿದೆ. ಗುತ್ತಿಗೆದಾರರು ಬಿಲ್ ಪಡೆಯಲು ಬೆಂಗಳೂರು ಮಟ್ಟದಲ್ಲಿ ಶೇ.12 ಕೊಡಬೇಕು. ಆನಂತರ ಸ್ಥಳೀಯ ಎಂಜಿನಿಯರ್‌ಗಳ ಮಟ್ಟದಲ್ಲಿ ಶೇ.10 ಪರ್ಸೆಂಟೇಜ್ ಕೊಡುವ ಅನಿವಾರ್ಯ ಸ್ಥಿತಿ ಇದೆ. ಮೋದಿ ಅವರು ಹಿಂದಿನ ಸಮ್ಮಿಶ್ರ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಟೀಕಿಸುತ್ತಿದ್ದರು. ಈಗ ಸರ್ಕಾರ ಎಷ್ಟು ಪರ್ಸೆಂಟ್ ತೆಗೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಪ್ರಧಾನಿಯವರು ಹೇಳಲಿ ಎಂದು ಸವಾಲು ಹಾಕಿದರು.
ಜಲ ಸಂಪನ್ಮೂಲ ಇಲಾಖೆಯಲ್ಲಿನ ಭ್ರಷ್ಟಾಚಾರ, ಬೆಂಗಳೂರಿನಲ್ಲಿರುವ ಕಾವೇರಿ ನೀರಾ ವರಿ ನಿಗಮದ ವಿರುದ್ಧ ಶೀಘ್ರದಲ್ಲಿಯೇ ಧರಣಿ ಕೂರುವೆ ಎಂದು ಹೇಳಿದ ರೇವಣ್ಣ ಅವರು, ರಾಜಕಾರಣಿಗಳಿಗೆ ಕಮೀಷನ್ ಕೊಡುತ್ತಿರುವ ಕೆಲ ಅಧಿಕಾರಿಗಳು ಜೈಲಿಗೆ ಹೋಗಬೇಕಾದ ದಿನ ಬರುತ್ತಿದೆ ಎಂದೂ ಎಚ್ಚರಿಸಿದರು.