ಹಾಸನ: ಬಿಜೆಪಿ ಸರ್ಕಾರ ಹಾಸನ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಲಿ. ಯಾವ ಮುಖವಿಟ್ಟುಕೊಂಡು ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಕೊಡಿ ಎಂದು ಹಾಸನ ಜಿಲ್ಲೆಯ ಮತದಾರರನ್ನು ಬಿಜೆಪಿಯವರು ಕೇಳುತ್ತಾರೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಹಾಸನ ಜಿಲ್ಲೆಗೆ ಸಿಕ್ಕಿರುವ ಕೊಡುಗೆ ಎಂದರೆ ಬೀದಿ, ಬೀದಿಗಳಲ್ಲಿ ಮದ್ಯದಂಗಡಿಗಳು, ಅಕ್ರಮ ಮರಳು ದಂಧೆ ಮಾತ್ರ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಕ್ಷೇತ್ರದಲ್ಲಿಯೂ ಇಲ್ಲ: ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯೇ ನಡೆಯಿತು. ಪ್ರತಿ ಹೋಬಳಿಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಮಂಜೂರು ಮಾಡಿದರು. ಆ ಕಾಲೇಜುಗಳಿಗೆ ಮೂಲ ಸೌಕರ್ಯವನ್ನೂ ಒದಗಿಸಲಾಯಿತು. ಹಾಸನ ಜಿಲ್ಲೆಯಲ್ಲಿರುವಷ್ಟು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಧಾನಿ ಕ್ಷೇತ್ರದಲ್ಲಿಯೂ ಇಲ್ಲ ಎಂದು ಹೇಳಿದರು.
ಸಿಎಂ ಮನೆ ಮುಂದೆ ಧರಣಿ: ಜಿಲ್ಲೆಯ ಎಲ್ಲಾ ಶಿಕ್ಷಕರು, ಪದವೀಧರರು, ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು ಅವರಿಗೆ ಮತ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಶೈಕ್ಷಣಿಕ ಕ್ರಾಂತಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ ರೇವಣ್ಣ, ಹೊಳೆನರಸೀಪುರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಕೋರ್ಸ್ ತೆರೆಯಬೇಕೆಂದು ನಾನು ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡಿದೆ ಎಂದು ಹೇಳಿದರು.
ಕೀಳು ಮಟ್ಟದ ರಾಜಕಾರಣ: ಹಾಸನ ತಾಲೂಕು ಮೊಸಳೆ ಹೊಸಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮುಚ್ಚಿಸಲು ಉನ್ನತ ಶಿಕ್ಷಣ ಸಚಿವರು ಮುಂದಾಗಿದ್ದರು. ಡಾ. ಅಶ್ವತ್ಥನಾರಾಯಣಗೌಡ ಅವರಿಗೆ ಅನುಭವವೇ ಇಲ್ಲ. ಶೈಕ್ಷಣಿಕ ಅಭಿವೃದ್ಧಿಯಲ್ಲೂ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿದ್ದ ಒಬ್ಬ ಮಹಿಳಾ ಪ್ರಾಧ್ಯಾಪರನ್ನು ಗದಗ ಜಿಲ್ಲೆಗೆ ವರ್ಗಾವಣೆ ಮಾಡಿದ್ದಾರೆ. ಎಳೆ ಮಗುವಿನ ತಾಯಿ ಆಗಿರುವ ಪ್ರಾಧ್ಯಾಪಕಿಯ ಪತಿ ಜೆಡಿಎಸ್ ಮುಖಂಡರೆಂಬ ಕಾರಣಕ್ಕೆ ಆಕೆಯನ್ನು ವರ್ಗಾವಣೆ ಮಾಡಲಾಗಿದೆ ಎಂದು ದೂರಿದರು.
ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು: ಜಿಲ್ಲೆಯಲ್ಲಿ ಅಬಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪ್ರತಿ ತಿಂಗಳೂ 5 ರಿಂದ 10 ಕೋಟಿ ರೂ. ಕಮೀಷನ್ ಸಂಗ್ರಹವಾಗುತ್ತಿದೆ. ಅದು ಯಾರಿಗೆ ಹೋಗುತ್ತಿದೆ ಎಂಬುದನ್ನು ಬಿಜೆಪಿ ಮುಖಂಡರೇ ಹೇಳಬೇಕು. ಇಂತಹ ಎಲ್ಲಾ ಅಕ್ರಮಗಳು ನಿಲ್ಲಬೇಕಾದರೆ ಬಿಜೆಪಿ ಸರ್ಕಾರ ಹೋಗಬೇಕು. ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಮು ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರಿಗೆ ಜೆಡಿಎಸ್ ಏನು ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೋ ಗೊತ್ತಿಲ್ಲ. ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಆನಂತರ ಕಾಂಗ್ರೆಸ್ ಪರ ಕೆಲಸ ಮಾಡಲಿ ಎಂದು ರೇವಣ್ಣ ಪ್ರತಿಕ್ರಿಯಿಸಿದರು.