ರಾಮನಗರ: ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ, ಆದರೂ ಉಲ್ಲಂಘಿಸಿ, ಲೋಕಸಭೆ, ವಿಧಾನಸಭೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುತ್ತಿದೆ ಎಂದು ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿಎಂ ಎಚ್.ಸಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ತಾಲೂಕಿನ ಬಿಡದಿ ಬಳಿಯ ಕೇತಗನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳ ಚುನಾವಣೆ ಆಕಾಂಕ್ಷಿಗಳ ಸಭೆಗೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್ 2ನೇಅಲೆ ತೀವ್ರವಾಗುತ್ತಿದ್ದರೂ ರಾಜ್ಯ ಸರ್ಕಾರ ಚುನಾವಣೆಗಳನ್ನು ಮುಂದೂಡಲಿಲ್ಲವೇಕೆ ಎಂದು ಪ್ರಶ್ನಿಸಿದರು. ಚುನಾವಣಾಪ್ರಚಾರದಲ್ಲಿ ಸಹಸ್ರಾರು ಮಂದಿ ಜನ ಸೇರುತ್ತಿದ್ದಾರೆ. ಆತಂಕದ ನಡುವೆ ಚುನಾವಣೆ ಏಕೆ ಎಂದು ವಿವರಿಸಿದರು.
ರಾಜ್ಯ ಸರ್ಕಾರದ ಬೇಜವಾಬ್ದಾರಿ ನಡವಳಿಕೆ ಹಾಗೂ ಅವೈಜ್ಞಾನಿಕ ಕ್ರಮಗಳಿಂದಾಗಿ ಕೋವಿಡ್ ಸೋಂಕು ಉಲ್ಬಣಗೊಳ್ಳಲು ಕಾರಣ ಎಂದು ಟೀಕಾಪ್ರಹಾರ ನಡೆಸಿದರು. ಜನ ಸಾಮಾನ್ಯರಿಗೆ ಎಚ್ಚರಿಕೆಯಿಂದ ಇರುವಂತೆ ನಾವು ಹೇಳುತ್ತಿದ್ದೇವೆ. ಆದರೆ, ನಮ್ಮ ಹಣೆಬರಹ ಏನಾಗುತ್ತದೆಯೋ ಎಂಬ ಭಯ ನಮಗೂ ಕಾಡುತ್ತಿದೆ ಎಂದು ವಿವರಿಸಿದರು.
ರಾತ್ರಿ ಕರ್ಫ್ಯೂದಿಂದ ಏನು ಉಪಯೋಗ?: ಜನರ ಜೊತೆ ಜನಪ್ರತಿನಿಧಿಗಳು ಚೆಲ್ಲಾಟ ಆಡುತ್ತಿದ್ದೇವೆ. ರಾತ್ರಿ ಕರ್ಫ್ಯೂ, ಲಾಕ್‌ಡೌನ್ ಮಾಡುವುದರಿಂದ ಯಾರಿಗೆ ಉಪಯೋಗವಾಗುತ್ತದೆ? ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಂಕಿತರಿಗೆ ನೀಡುವ ಚುಚ್ಚು ಮದ್ದಿನ ಕೊರತೆ ಕಾಡುತ್ತಿರುವುದು ಗಮನಕ್ಕೆ ಬಂದಿದೆ. ರಾಜ್ಯ ಸರ್ಕಾರವೇ ತನ್ನಲ್ಲಿ ನ್ಯೂನತೆಗಳನ್ನಿಟ್ಟುಕೊಂಡು ಜನದ ಜೀವದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.