ಮಲೇಬೆನ್ನೂರು: ನಾನು ಕೂಡ ಸರಕಾರ ನಡೆಸಿದ್ದೇನೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸುದೀರ್ಘ ಅವಧಿಗೆ ಆಡಳಿತದಲ್ಲಿದ್ದವು. ಆದರೆ ಏನು ನಡೆದಿದೆ ಎಂಬುದು ಸರಕಾರ ನಡೆಸಿದವರಿಗೆಲ್ಲರಿಗೂ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅಧಿಕಾರಾವಧಿಯಲ್ಲಿ ಯಾರಲ್ಲೂ ಕಮಿಷನ್ ಕೇಳಿಲ್ಲ. ಮಂತ್ರಿಗಳು ಸ್ವತ್ಛವಾಗಿದ್ದರೂ, ಹಣ ಪಡೆಯದಿದ್ದರೂ ಅಧಿಕಾರಿಗಳ ಮಟ್ಟದಲ್ಲಿ ಮಂತ್ರಿಗಳಿಗೂ ಸೇರುತ್ತದೆ ಎಂದು ಹೇಳಿ ವಸೂಲಿ ಮಾಡುತ್ತಾರೆ. ಸತ್ಯ ಹೇಳಲು ಹೆದರುವ ಅಗತ್ಯವಿಲ್ಲ. ಒಬ್ಬ ಮಂತ್ರಿ ಶೇ.40 ಕಮಿಷನ್ ಪಡೆಯುತ್ತಾರೆ ಎಂಬ ಬಾಲಿಶ ಹೇಳಿಕೆ ನೀಡಲು ನಾನು ಸಿದ್ಧನಿಲ್ಲ ಎಂದರು.
ಸಂತೋಷ್ ಪಾಟೀಲ್ ತನ್ನ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ಕಾರಣ ಎಂದು ವಾಟ್ಸ್‌ಆ್ಯಪ್‌ನಲ್ಲಿ ಹೇಳಿಕೊಂಡಿದ್ದಾರೆ. ಕಾರ್ಯಾದೇಶವಿಲ್ಲದೆ ಕೆಲಸ ಮಾಡಿದ್ದೇನೆ ಎನ್ನುವ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಹೇಳಿಕೆ ಪ್ರಕಾರ ಈಶ್ವರಪ್ಪ ಅಲ್ಲ, ಮುಖ್ಯಮಂತ್ರಿಗಳಿಗೂ ಹಣ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸಾವಿನಲ್ಲಿ ಹಲವಾರು ಸಂಶಯಗಳು ಕಂಡು ಬರುತ್ತಿವೆ. ಸರಕಾರ ತನಿಖೆ ನಡೆಸಿದ ಬಳಿಕ ಸತ್ಯ ಬಯಲಾಗಲಿದೆ. ಈಶ್ವರಪ್ಪ ರಾಜೀನಾಮೆ ಕೊಟ್ಟ ಕೂಡಲೇ ಆರೋಪ ಸಾಬೀತಾಯಿತೆಂದು ಹೇಳಲು ಸಾಧ್ಯವಿಲ್ಲ. ಆದರೆ ಅವರು ನೈತಿಕತೆಯಿಂದ ರಾಜೀನಾಮೆ ನೀಡಿರಬಹುದು ಹಾಗೂ ಆರೋಪ ಮುಕ್ತರಾದರೆ ಪುನಃ ಮಂತ್ರಿಯಾಗಬಹುದು ಎಂದರು.
ಮಾತಿಗೆ ಸೀಮಿತ :
ಪ್ರಧಾನಿ ಮೋದಿ ಅಧಿಕಾರದ ಅವ ಧಿಯಲ್ಲಿ ಕಪ್ಪುಪಟ್ಟಿಯಲ್ಲಿರುವ ಕಾರ್ಪೊರೇಟ್ ಕಂಪೆನಿಯವರು ಗಂಟೆಗೆ 52 ಕೋಟಿ ಸಂಪಾದನೆ ಮಾಡುತ್ತಿರುವುದು ಹೇಗೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಮೋದಿ ಹೇಳಿಕೆಗಳು ಕೇವಲ ಬಾಯಿಮಾತಿಗೆ ಸೀಮಿತವಾಗಿವೆ ಎಂದರು.
ನನ್ನ ಮೇಲೆ ವಿಶ್ವಾಸವಿದ್ದರೆ ರಾಜ್ಯದ ಜನರು ನನಗೆ 123 ಸ್ಥಾನಗಳ ಸಂಪೂರ್ಣ ಬಹುಮತದಿಂದ ಆರಿಸಿ ತರಬೇಕು. 5 ವರ್ಷಗಳವರೆಗೆ ಆಡಳಿತ ನಡೆಸಲು ಅವಕಾಶ ಕೊಟ್ಟು ನೋಡಲಿ. ಎಲ್ಲದಕ್ಕೂ ಕಡಿವಾಣ ಹಾಕುತ್ತೇನೆ.
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ