ಮೈಸೂರು: ಇಲವಾಲದ ಸುತ್ತಮುತ್ತಲಿನ 52 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಿದ್ದೆ. ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ಹಣ ಕೊಟ್ಟರೂ ಅದನ್ನು ಇನ್ನೂ ಕೂಡ ಈ ಸರ್ಕಾರ ಅನುಷ್ಠಾನ ಮಾಡಿಲ್ಲ. ತೆರಿಗೆ ಹಣವನ್ನು ಸ್ವೇಚ್ಛಾಚಾರವಾಗಿ ಸರ್ಕಾರ ಲೂಟಿ ಮಾಡುತ್ತಿದೆ ವಿನಃ ಜನರಿಗೆ ನೆರವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರಿನ ಬೆಳವಾಡಿಯ ಚಾಮುಂಡೇಶ್ವರಿ ನಗರದ ಚಾಮುಂಡೇಶ್ವರಿ ದೇವಸ್ಥಾನವನ್ನು ಉದ್ಘಾಟಿಸಿ, ಮಾತಾನಾಡಿದ ಅವರು,
ಕೊರೊನಾದಿಂದ ಮೃತಪಟ್ಟ ಪತಿ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾದ ತಾಯಿಯೊಬ್ಬಳು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಳು. ಇಂತಹ ಹಲವು ಕುಟುಂಬ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಸರ್ಕಾರಕ್ಕೆ ಇದು ಕಾಣಿಸುತ್ತಿಲ್ಲ ಎಂದು ಅಸಮಾಧಾನವನ್ನು ಹೊರ ಹಾಕಿದರು.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನರು ಪ್ರೀತಿಯಿಂದ ನೋಡಿದ್ದಾರೆ. ಈ ಕ್ಷೇತ್ರದ ಜನರ ಋಣ ಇದೆ.ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಪಕ್ಷದಿಂದ ಬೆಳೆದವರು ಈ ಪಕ್ಷ ಮುಗಿತು ಅಂತಾರೆ, ಆದರೆ ನಿಮ್ಮಂತಹ ಜನರ ಪ್ರೀತಿ ವಿಶ್ವಾಸ ಇರುವ ಕಾರಣ ಜೆಡಿಎಸ್ ಪಕ್ಷ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ 2023 ಚುನಾವಣೆಯಲ್ಲಿ ಸ್ವತಂತ್ರ ಸರ್ಕಾರ ನಡೆಸಲು ಜನರು ಬೆಂಬಲಿಸಿ ಎಂದು ಕೇಳಿಕೊಂಡರು.
ಇದನ್ನೂ ಓದಿ: ಮ್ಯಾನೇಜ್ಮೆಂಟ್ ಕೋಟಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ : ಸಚಿವ ಕೋಟ ಶ್ರೀನಿವಾಸ ಪೂಜಾರಿ
ಆರ್ಥಿಕ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿಯಾಗಿ ಸಾಲ ಮನ್ನಾ ಮಾಡಿದ್ದೆ. ಇದೇ ರೀತಿ ಮುಂದಿನ ಚುನಾವಣೆ ಗೆದ್ದರೆ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಖಾಸಗಿ ಶಾಲೆ ಮೀರಿಸುವ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ತಾಲ್ಲೂಕು ಕೇಂದ್ರದಲ್ಲಿ 30 ಬೆಡ್ ನ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ರೈತರ ಬೆಳೆಗೆ ಒಳ್ಳೆಯ ಬೆಲೆ ಸಿಗುವ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಪಂಚರತ್ನ ಯೋಜನೆ ರೂಪಿಸಲಾಗುವುದು. ಅನ್ನ ಭಾಗ್ಯ ಕಾರ್ಯಕ್ರಮದ ಬಗ್ಗೆ ಮಾತನಾಡಲ್ಲ. 10 ಕೆ.ಜಿ.ಅಕ್ಕಿ ಕೊಡುವುದಲ್ಲ, ನಿಮ್ಮನ್ನು ಸ್ವಾವಲಂಬಿ ಆಗಲು ನಾನು ಪಂಚರತ್ನ ಕಾರ್ಯಕ್ರಮ ಅನುಷ್ಠಾನ ಮಾಡುತ್ತೇನೆ. ಸ್ವತಂತ್ರ ಸರ್ಕಾರ ನೀಡಿದ್ರೆ ಸಂಧ್ಯಾ ಸುರಕ್ಷಾ ಯೋಜನೆಯನ್ನು ರೂಪಿಸಲಾಗುತ್ತದೆ ಎಂದು ವಿಶ್ವಾಸ ನೀಡಿದರು.
ಹಣ ಲೂಟಿ ಮಾಡಿ ಚುನಾವಣೆಯಲ್ಲಿ ಜನರಿಗೆ ಹಣ ಹಂಚುತ್ತಾರೆ. ಮುಂದೆ ಚುನಾವಣೆಯಲ್ಲಿ ಹಣ ಪಡೆಯಬೇಡಿ. ಕಾಂಗ್ರೆಸ್, ಬಿಜೆಪಿ ಸರ್ಕಾರ ನೋಡಿದ್ದೀರಾ. ನರೇಂದ್ರ ಮೋದಿ ಕೂಡ ನೋಡಿದ್ದೀರಾ. ನಮ್ಮ ಜೆಡಿಎಸ್ ಪಕ್ಷಕ್ಕೆ ಒಂದು ಬಾರಿ ಸ್ವತಂತ್ರ ಸರ್ಕಾರ ರಚನೆಗೆ ಅವಕಾಶ ನೀಡಿ ಎಂದು ಜನರಲ್ಲಿ ಕೇಳಿಕೊಂಡರು.
ಹೆಚ್.ಡಿ.ದೇವೇಗೌಡರು ಪ್ರಧಾನಿ ಆಗಿದ್ದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೇ ಒಂದು ರಕ್ತ ಪಾತ ಆಗಿರಲಿಲ್ಲ. ಆದರೆ ಈಗ ಅಲ್ಲಿ ಪ್ರತಿದಿನ ಯೋಧರು ಹಾಗೂ ನಾಗರೀಕರ ರಕ್ತ ಪಾತವಾಗುತ್ತಿದೆ ಎಂದರು.