ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೃದಯಕ್ಕೆ ಸಂಬಂಧಿಸಿದ
ಲ್ಯಾಪ್ರೋಸ್ಕೋಪಿಕ್ ಕೀ ಹೋಲ್ ಶಸ್ತ್ರಚಿಕಿತ್ಸೆಯನ್ನು ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ ಯಶಸ್ವಿಯಾಗಿ ನಡೆಸಲಾಗಿದೆ.
ಸುಮಾರು 45 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದ್ದು, ಯಶಸ್ವೀಯಾಗಿದ್ದು ಕುಮಾರಸ್ವಾಮಿ ಅವರು ಚೇತರಿಸಿಕೊಳ್ಳಲು 3 ಗಂಟೆಗಳು ಬೇಕಾಗುತ್ತದೆ ಎಂದು ಆಸ್ಪತ್ರೆಯ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಲಂಡನ್‌ನಿಂದ ಬಂದಿದ ಮೂವರು ವೈದ್ಯರು ಮತ್ತು ಭಾರತದ ಐವರು ಹೃದ್ರೋಗ ತಜ್ಞರು ಜತೆಗೂಡಿ ಹೃದಯದಲ್ಲಿ ಅಳವಡಿಸಿದ್ದ ಮೆಟಲ್ ವಾಲ್ವ್ ಬ್ಲಾಕ್ ತೆಗೆದಿದ್ದು, ಬದಲಾಗಿ ಟಿಶ್ಯು ವಾಲ್ವ್ ಬದಲಾವಣೆ ಮಾಡಿದ್ದಾರೆ. ಇದರಿಂದ ಮುಂದಿನ 15 ವರ್ಷಗಳ ಕಾಲ ಯಾವುದೇ ತೊಂದರೆಯಾಗದು ಎಂದು ತಿಳಿದು ಬಂದಿದೆ.
ಶಸ್ತ್ರ ಚಿಕಿತ್ಸೆ ನಂತರ ಒಂದು ತಿಂಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದು ಸಿಂಗಪುರಕ್ಕೆ ವಿಶ್ರಾಂತಿಗಾಗಿ ತೆರಳುತ್ತಿದ್ದಾರೆ. ಈಗಾಗಲೇ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಹಾಗೂ ಆ ನಂತರ ಕಡ್ಡಾಯ ವಿಶ್ರಾಂತಿ ಜತೆಗೆ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ ಬಗ್ಗೆ ಕುಮಾರಸ್ವಾಮಿಯವರಿಗೆ ತಿಳಿಸಿದ್ದಾರೆ.
ಸಿಂಗಪುರದಿಂದ ಮರಳಿದ ನಂತರ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕಾಗಿ ವಿಶೇಷ ವಾಹನ ಸಹ ಸಿದ್ಧಪಡಿಸಲಾಗಿದೆ ಎಂದು
ಪಕ್ಷದ ಮೂಲಗಳು ತಿಳಿಸಿವೆ.