ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದಿಂದ ರಾಜ್ಯದ ಮೈತ್ರಿ ಸರ್ಕಾರದ ಬುಡ ಅಲುಗಾಡಿದ್ದು, ಎರಡೂ ಪಕ್ಷಗಳ ನಾಯಕರ ನಡುವಿನ ಮುನಿಸಿಗೆ ತೇಪೆ ಹಚ್ಚುವ ಪ್ರಯತ್ನ ಶುರುವಾಗಿದೆ. ಮೈತ್ರಿ ಸರ್ಕಾರದ ನಾಯಕರಾಗಿ ನೀವೇ ಮುಂದುವರೆಯಿರಿ, ಆದರೆ, ಕಾಂಗ್ರೆಸ್ ಶಾಸಕರ ಸಮಸ್ಯೆಗೆ ಸ್ಪಂದಿಸಿ ಎಂಬ ಮನವಿ ಮಾಡುವ ಮೂಲಕ ಕಾಂಗ್ರೆಸ್ ಸಚಿವರು ಕುಮಾರಸ್ವಾಮಿ ನಾಯಕತ್ವದಲ್ಲಿಯೇ ಮುಂದುವರೆಯಲು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಅಂತ್ಯವಾಗುವುದನ್ನು ತಪ್ಪಿಸಲು ಸ್ವತಹ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡಿ, ಪೂರ್ಣ ಅವಧಿಗೆ ನೀವೇ ಮುಂದುವರೆಯಿರಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸೂಚನೆ ನೀಡಿದ್ದಾರೆ. ರಾಜ್ಯ ನಾಯಕರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂಬ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅದೇ ಕಾರಣಕ್ಕೆ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆದಿದ್ದ ಸಚಿವರ ಔಪಚಾರಿಕ ಸಂಪುಟ ಸಭೆಗೂ ಮೊದಲು ಕಾಂಗ್ರೆಸ್ ಸಚಿವರು ಹಾಗೂ ನಾಯಕರ ಸಭೆ ಕರೆದಿದ್ದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪಕ್ಷದ ನಿರ್ಧಾರವನ್ನು ಕುಮಾರಸ್ವಾಮಿ ಅವರಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ.
ಸಂಪುಟ ಸಭೆಯ ಆರಂಭದಲ್ಲಿಯೇ ಸರ್ಕಾರದ ಆರಂಭದಿಂದಲೂ ಮೈತ್ರಿ ಪಕ್ಷಗಳಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಸಂಪುಟ ಸಹೋದ್ಯೋಗಿಗಳ ಗಮನಕ್ಕೆ ತಂದು ಈ ರೀತಿಯ ವಾತಾವರಣ ಮುಂದುವರೆದರೆ, ಮೈತ್ರಿ ಮುಂದುವರೆಸುವುದು ಕಷ್ಟ ಎನ್ನುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್ ಸಚಿವರು ಮುಂದಿನ ದಿನಗಳಲ್ಲಿ ಆ ರೀತಿಯ ಯಾವುದೇ ಬೆಳವಣಿಗೆಗಳು ಆಗದಂತೆ ಎಚ್ಚರ ವಹಿಸುವ ಹಾಗೂ ನಿಮ್ಮ ಮೇಲೆ ಎಲ್ಲ ಸಚಿವರೂ, ಪಕ್ಷದ ಶಾಕಸರಿಗೆ ಸಂಪೂರ್ಣ ವಿಶ್ವಾಸವಿದೆ. ನೀವೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬ ಸಲಹೆ ರೂಪದ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದು-ಸಿಎಂ ಸಮನ್ವಯ: ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಿನ ಆಂತರಿಕ ಭಿನ್ನಾಭಿಪ್ರಾಯವೇ ಇಷ್ಟೆಲ್ಲ ಬೆಳವಣಿಗೆಗೆ ಕಾರಣ ಎಂಬ ಅಂಶ ಮೈತ್ರಿ ಪಕ್ಷಗಳ ನಾಯಕರಿಗೆ ಅರಿವಾಗಿದ್ದು, ಇನ್ನು ಮುಂದೆ ಸರ್ಕಾರದಲ್ಲಿ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಅವರ ಸಲಹೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ-ಶಾಸಕರ ಸಭೆಗೆ ಮನವಿ: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರ ಮನವಿಗೆ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪ ಇದೆ. ಅದೇ ಕಾರಣಕ್ಕೆ ಶಾಸಕರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶೀಘ್ರವೇ ಜಿಲ್ಲಾವಾರು ಶಾಸಕರು ಹಾಗೂ ಸಚಿವರ ಸಭೆ ಕರೆದು ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂಬ ಮನವಿಯನ್ನು ಕಾಂಗ್ರೆಸ್ ಸಚಿವರು ಮಾಡಿದ್ದಾರೆ. ಅಲ್ಲದೇ ಇಲಾಖಾವಾರು ಸಭೆಗಳನ್ನೂ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದಿದ್ದು, ಜೂನ್ 10 ರ ನಂತರ ಶಾಸಕರ ಜಿಲ್ಲಾವಾರು ಸಭೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.