ಬೆಂಗಳೂರು: ಕಬ್ಬು ಬೆಳೆಗಾರರ ಪ್ರತಿಭಟನೆಯಿಂದ ಉಂಟಾಗಿರುವ ಸಮಸ್ಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಯವರು ಮಂಗಳವಾರ ರಾತ್ರಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಸಲಹೆ-ಸೂಚನೆ ಪಡೆದರು.
ರಾತ್ರಿ 8.30ಕ್ಕೆ ಪದ್ಮನಾಭನಗರ ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ದೇವೇಗೌಡರ ಜತೆ ಸಮಾಲೋಚನೆ ನಡೆಸಿ, ಕಬ್ಬು ಬೆಳೆಗಾರರು ಸೇರಿದಂತೆ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಪಡೆದರು.
ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ಪ್ರತಿಪಕ್ಷ ಬಿಜೆಪಿ, ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಕಣ್ಣಿಟ್ಟಿರುವುದರಿಂದ ಆದಷ್ಟು ವಿವಾದಾತ್ಮಕ ಹೇಳಿಕೆ ಅಥವಾ ನಿರ್ಧಾರಗಳಿಂದ ದೂರ ಉಳಿಯುವುದು ಸೂಕ್ತ ಎಂದು ಈ ಸಂದರ್ಭದಲ್ಲಿ ದೇವೇಗೌಡರು ಕಿವಿಮಾತು ಹೇಳಿದರು ಎಂದು ಹೇಳಲಾಗಿದೆ.
ಸಂಪುಟ ವಿಸ್ತರಣೆ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗಿನ ಭೇಟಿ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.