Advertisement

Karnataka Politics; ‘ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲ’: ಕುಮಾರಸ್ವಾಮಿ ತಿರುಗೇಟು

02:55 PM Nov 13, 2023 | Team Udayavani |

ಬೆಂಗಳೂರು: ಗ್ಯಾರಂಟಿಗಳಿಗೂ ಕುಮಾರಸ್ವಾಮಿಗೂ ಏನು ಸಂಬಂಧ ಎಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು; ʼಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿರುವ ಅವರು; ಜನರು ಆಡಳಿತ ಪಕ್ಷದಲ್ಲಿ ಕೂರಿಸಿದ್ದಾರೆ ಎಂದಷ್ಟಕ್ಕೇ ಇವರ ತಲೆ ನಿಲ್ಲುತ್ತಿಲ್ಲ. ಚಕ್ರ ತಿರುಗಲು ಶುರು ಮಾಡಿದೆ. ಅದು ಕೆಳಕ್ಕೆ ಬಂದೇ ಬರುತ್ತದೆ. ಸ್ವಲ್ಪ ಸಮಯ ಬೇಕಷ್ಟೇ, ಆಗ ತಿರುಗುವ ತಲೆ ತಾನಾಗಿಯೇ ನಿಲ್ಲುತ್ತದೆ ಎಂದು ಮಾರ್ಮಿಕವಾಗಿ ಚುಚ್ಚಿದ್ದಾರೆ.

ಡೂಪ್ಲಿಕೇಟ್‌ ಸಿಎಂ (DCM) ಬಹಳ ಆವೇಶದಲ್ಲಿದ್ದಾರೆ. ಅತಿಯಾದ ಆವೇಶ ಆರೋಗ್ಯಕ್ಕೆ ಹಾನಿಕಾರಕ! ಈ ಎಚ್ಚರಿಕೆ ನೆನಪಿದ್ದರೆ ಕ್ಷೇಮ. ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೂ ಏನು ಸಂಬಂಧ? ಎಂಬ ಆಣಿಮುತ್ತು ಉದುರಿಸಿದ್ದಾರೆ. ಅಧಿಕಾರದ ಪಿತ್ತ ನೆತ್ತಿಗೇರಿ ಮಿದುಳು ಕೆಲಸ ಮಾಡದಿದ್ದರೆ ನಾಲಿಗೆ ಹೀಗೆ ಮಾತನಾಡುತ್ತದೆ. ಅಚ್ಚರಿಯೇನೂ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Hats Off: 22 ವರ್ಷದಿಂದ ಈ ರಾಜ್ಯದ 7 ಹಳ್ಳಿಗಳು ಪಟಾಕಿ ಸಿಡಿಸದೇ ದೀಪಾವಳಿ ಆಚರಿಸುತ್ತಿದೆ

ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್‌ ಅಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ, ಪ್ರತಿಪಕ್ಷ ಇರುತ್ತವೆ. ಇದು ಗೊತ್ತಿಲ್ಲದಷ್ಟು ಅಜ್ಞಾನವೇ? ಪ್ರಶ್ನೆ ಮಾಡಬೇಕು ಎಂತಲೇ ಜನ ನನ್ನನ್ನು ವಿರೋಧಪಕ್ಷದಲ್ಲಿ ಕೂರಿಸಿದ್ದಾರೆ. ಇವರನ್ನು ಆಡಳಿತ ಪಕ್ಷದಲ್ಲಿ ಕೂರಿಸಿದ್ದಾರೆ ಎಂದಷ್ಟಕ್ಕೇ ತಲೆ ನಿಲ್ಲುತ್ತಿಲ್ಲ. ಚಕ್ರ ತಿರುಗಲು ಶುರು ಮಾಡಿದೆ. ಅದು ಕೆಳಕ್ಕೆ ಬಂದೇ ಬರುತ್ತದೆ. ಸ್ವಲ್ಪ ಸಮಯ ಬೇಕಷ್ಟೇ, ಆಗ ತಿರುಗುವ ತಲೆ ತಾನಾಗಿಯೇ ನಿಲ್ಲುತ್ತದೆ ಕುಟುಕಿದ್ದಾರೆ.

Advertisement

ಚೀಫ್‌ ಗಿಮಿಕ್‌ ಎಂದಿದ್ದರು ಸಚಿವರು: ಪಂಚರತ್ನಗಳು ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾನು ರೂಪಿಸಿದ್ದ ಪಂಚಸೂತ್ರಗಳು. ಕಾಂಗ್ರೆಸ್ ಗ್ಯಾರಂಟಿಗಳು ಜನರನ್ನು ಶಾಶ್ವತ ʼಆರ್ಥಿಕವೈಕಲ್ಯʼರನ್ನಾಗಿಸುವ ತಾತ್ಕಾಲಿಕ ತಂತ್ರಗಳಷ್ಟೇ. 75 ವರ್ಷಗಳಿಂದಲೂ ಇದನ್ನೇ ಮಾಡಿದೆ. ಜನರ ಕೈಲಿ ಭಿಕ್ಷಾಪಾತ್ರೆ ಇದ್ದರೆ, ವೋಟಿನ ಜೋಳಿಗೆ ಭರ್ತಿ ಆಗುತ್ತದೆ ಎನ್ನುವ ದುಷ್ಟಬುದ್ಧಿ ಇವರದ್ದು. ಜನರು ಸ್ವಾವಲಂಬಿಗಳಾಗಿ ಗೌರವಯುತ ಜೀವನ ನಡೆಸಬೇಕು ಎನ್ನುವ ಹಂಬಲ ನನ್ನದಾಗಿತ್ತು. ಡೂಪ್ಲಿಕೇಟ್‌ ಸಿಎಂ ಸಹೋದ್ಯೋಗಿ ಸಚಿವರೊಬ್ಬರೇ ಹೇಳಿದ್ದರಲ್ಲ; “ಎಲೆಕ್ಷನ್‌ ಗೆಲ್ಲಬೇಕಾದರೆ ಗ್ಯಾರಂಟಿಗಳಂಥ ಚೀಫ್‌ ಗಿಮಿಕ್‌ ಮಾಡಲೇಬೇಕು” ಎಂದು. ಗ್ಯಾರಂಟಿಗಳು ಚೀಫ್‌ ಗಿಮಿಕ್‌ ಎನ್ನುವ ಆ ಸಚಿವರ ಮಾತಿಗೆ ನನ್ನ ಸಹಮತವಿದೆ ಡಿಕೆಶಿಗೆ ಟಾಂಗ್‌ ನೀಡಿದ್ದಾರೆ.

ಗ್ಯಾರಂಟಿಗಳ ಬಗ್ಗೆ ಶ್ವೇತಪತ್ರ ಹೊರಡಿಸಿ: ಗ್ಯಾರಂಟಿಗಳು ಹಳ್ಳ ಹಿಡಿದು ವಿಫಲವಾಗಿವೆ. ಅನುಮಾನವೇ ಇಲ್ಲ. ಯಾವ ಗ್ಯಾರಂಟಿಯೂ ಸಮರ್ಪಕ ಜಾರಿ ಆಗಿಲ್ಲ. ಎಷ್ಟು ಜನರಿಗೆ ಫಲ ಸಿಕ್ಕಿದೆ? ಆರ್ಥಿಕವಾಗಿ ಹೊರೆ ಎಷ್ಟು ಬಿದ್ದಿದೆ? ಶ್ವೇತಪತ್ರ ಹೊರಡಿಸಿ. ಬನ್ನಿ ಚರ್ಚೆಗೆ, ನಾನು ತಯಾರಿದ್ದೇನೆ. ಅಧಿವೇಶನದಲ್ಲೂ ದಾಖಲೆ ಸಮೇತ ಚರ್ಚೆಗೆ ಸಿದ್ಧನಿದ್ದೇನೆ, ಉತ್ತರಿಸಿ. ಚನ್ನಪಟ್ಟಣದ ನನ್ನ ಜನರೂ ಮಾಹಿತಿ ನೀಡಿದ್ದಾರೆ, ರಾಜ್ಯದ ಉಳಿದ 223 ಕ್ಷೇತ್ರಗಳ ಜನರು ಕೊಟ್ಟ ವಿವರವೂ ನನ್ನಲ್ಲಿದೆ. ನೀವು ಒಳಗೊಳಗೆ ಮಾಡುತ್ತಿರುವ ಗಿಲೀಟುಗಳ ಮಾಹಿತಿಯೂ ಇದೆ. ಚರ್ಚೆ ಮಾಡೋಣಂತೆ ಎಂದು ಉಪ ಮುಖ್ಯಮಂತ್ರಿಗಳಿಗೆ ನೇರ ಸವಾಲು ಹಾಕಿದ್ದಾರೆ.

ರಾಮನ ಹೆಸರಿಗೂ ಗ್ಯಾರಂಟಿ ಇಲ್ಲ: ಕೋಟಿ ರೂಪಾಯಿ ಕೊಟ್ಟು ಗ್ಯಾರಂಟಿ ಸ್ಕೀಮುಗಳ ಬಗ್ಗೆ ಸಮೀಕ್ಷೆ ಮಾಡಿಸಿಕೊಂಡರಲ್ಲ, ಚನ್ನಪಟ್ಟಣದ ಜನರು ಏನು ಹೇಳಿದ್ದಾರೆಯೇ ಎಂಬ ಮಾಹಿತಿ ಅದರಲ್ಲಿ ಇದೆಯಾ? ಕೂಸು ಹುಟ್ಟುವ ಮುನ್ನವೇ ಕುಲಾವಿಯೇ? ಗ್ಯಾರಂಟಿ ಜಾರಿಗೆ ಮೊದಲೇ ಸಮೀಕ್ಷೆ ಪ್ಲ್ಯಾನ್‌ ಮಾಡಿಕೊಂಡಿದ್ದರಲ್ಲ, ಯಾಕೆ? ನಿಮ್ಮ ಯೋಗ್ಯತೆಗೆ ಇನ್ನು ʼಯುವನಿಧಿʼ ಬಂದೆ ಇಲ್ಲ. ಅದು ಬರುತ್ತೋ ಇಲ್ಲವೋ ಗೊತ್ತಿಲ್ಲ. ಅದನ್ನು ಚನ್ನಪಟ್ಟಣದ ಜನರನ್ನೇ ಕೇಳಬೇಕೆ? ಇವರ ರಾಜಕೀಯ ಸ್ವಾರ್ಥಕ್ಕೆ ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳನ್ನು ಬಲಿಗೊಟ್ಟು, ʼರಾಮನಗರʼ ಹೆಸರಿಗೇ ಕೊಕ್‌ ಕೊಡಲು ಹೊರಟಿದ್ದಾರೆ. ಆಯ್ಯೋ ದೇವೆರೇ, ಈ ಸರಕಾರದಲ್ಲಿ ರಾಮನ ಹೆಸರಿಗೂ ಗ್ಯಾರಂಟಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next