ಕಲಬುರಗಿ : ಸಾರ್ವಜನಿಕ ಹಿತಾಸಕ್ತಿ ಬಲಿಕೊಟ್ಟು ಕಾನೂನು ಗಾಳಿಗೆ ತೂರಿ ಆಸ್ತಿಯನ್ನು ಮಾಡಿಕೊಂಡಿರುವ ರಾಜ್ಯದ ಸಚಿವರೊಬ್ಬರ ಹಗರಣದ ಭ್ರಷ್ಟಾಚಾರವನ್ನು ನಾಳೆ (ಗುರುವಾರ) ವಿಧಾನಸಭೆ ಅಧಿವೇಶನದಲ್ಲಿ ದಾಖಲೆಗಳ ಸಮೇತ ಬಿಡುಗಡೆಗೊಳಿಸಿ ಬಯಲಿಗೆಳೆಯಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಶೇ. 40 ಭ್ರಷ್ಟಾಚಾರ ಈಗಾಗಲೇ ಸಾರ್ವಜನಿಕರಿಗೆ ಅನುಭವವಾಗಿದೆ. ಈಗ ಬಿಡುಗಡೆ ಮಾಡುವ ದಾಖಲೆಗಳು ಸಚಿವರೊಬ್ಬರ ಕರ್ಮಕಾಂಡವಾಗಿದೆ. ನಾಳಿನ ಸದನದಲ್ಲಿ ಇದಕ್ಕೆ ಸರ್ಕಾರ ಉತ್ತರ ನೀಡಲಿ. ನನ್ನನ್ನು ಕೆಣಕಿದವರಿಗೆ ಇದೊಂದು ಎಚ್ಚರಿಕೆ ಎಂದು ಗುಡುಗಿದರು.
ರೈತರ ಸಬ್ಸಿಡಿ ಹಣದಲ್ಲೂ ಪೆರ್ಸಂಟೇಜ್ ಪಡೆದಿರುವುದು ಹಾಗೂ ಸಚಿವರೊಬ್ಬರು ಸದನದಲ್ಲೇ ಅಧಿಕಾರಿ ತಮ್ಮ ಮಾತು ಕೇಳುತ್ತಿಲ್ಲ ಎನ್ನುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದರು.
ಬಳಿಕ ಮಾತನಾಡಿದ ಅವರು ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ರಾಜಕೀಯ ಗಣ್ಯರು ಆರೋಗ್ಯ ವಿಚಾರಣೆ ಮಾಡಲು ಭೇಟಿಯಾಗುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.
ಒತ್ತುವರಿ ತೋರಿಕೆಗೆ ಬೇಡ : ಬೆಂಗಳೂರು ಮಹಾನಗರದಲ್ಲಿ ಒತ್ತುವರಿ ತೆರವು ತೋರಿಕೆಗೆ ಬೇಡ. ಒಬ್ಬರ ಕಟ್ಟಡ ತೆರವುಗೊಳಿಸುವುದು. ಮತ್ತೊಬ್ಬರಿಗೆ ನೋಟೀಸ್ ನೀಡಿ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡುವುದು ಸರಿಯಲ್ಲ. ಒಂದು ನೀಲ ನಕ್ಷೆ ರೂಪಿಸಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಸ್ತೆ ಹೊಂಡದ ಮಧ್ಯ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ ವಧು!: ವಿಡಿಯೋ ವೈರಲ್