Advertisement

ಅಪ್ಪ ರಾಜಕೀಯದಲ್ಲಿ ಬೇಸತ್ತಿದ್ದಾರೆ; ನಾನು ಬರಲಾರೆ

12:18 PM Apr 03, 2017 | |

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್‌ ಕುಮಾರ್‌ನನ್ನು “ಜಾಗ್ವಾರ್‌’ ಮೂಲಕ ಲಾಂಚ್‌ ಮಾಡಿದಾಗ, ಒಂದು ಮಾತು ಕೇಳಿಬಂದಿತ್ತು, ಚಿತ್ರದಲ್ಲಿ ಸಂಪೂರ್ಣವಾಗಿ ತೆಲುಗಿನವರಿಗೆ ಅವಕಾಶ ಕೊಟ್ಟಿದ್ದಾರೆ, ಕನ್ನಡದವರನ್ನು ಕಡೆಗಣಿಸಿದ್ದಾರೆ ಎಂದು. ಈ ಮಾತು ಕುಮಾರಸ್ವಾಮಿ ಹಾಗೂ ನಿಖಿಲ್‌ ಇಬ್ಬರ ಕಿವಿಗೂ ಬಿದ್ದಿದೆ. ಈಗ ನಿಖೀಲ್‌ನ ಎರಡನೇ ಸಿನಿಮಾ ಆರಂಭವಾಗಿದೆ. ಈ ಚಿತ್ರದಲ್ಲಿ ಸಂಪೂರ್ಣವಾಗಿ ಕನ್ನಡದವರಿಗೆ ಅವಕಾಶ ಕೊಟ್ಟಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು “ಬಹದ್ದೂರ್‌’ ಚೇತನ್‌ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಪೂಜೆ ಆಗಿದ್ದು, ಜೂನ್‌ನಿಂದ ಚಿತ್ರೀಕರಣ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಹಾಗೂ ನಿಖೀಲ್‌ ಇಬ್ಬರೂ “ಜಾಗ್ವಾರ್‌’ನ ಅನುಭವ ಹಾಗೂ ಹೊಸ ಸಿನಿಮಾದ ತಯಾರಿ ಕುರಿತು “ಚಿಟ್‌ಚಾಟ್‌’ನಲ್ಲಿ ಮಾತನಾಡಿದ್ದಾರೆ…. 

Advertisement

 2ನೇ ಸಿನಿಮಾದ ತಯಾರಿ ಹೇಗಿದೆ?
ತಯಾರಿ ಜೋರಾಗಿದೆ. ಇಡೀ ತಂಡ ಕುಳಿತುಕೊಂಡು ಎರಡು ತಿಂಗಳಿನಿಂದ ಡಿಸ್ಕಶನ್‌ ಮಾಡುತ್ತಿದ್ದೇವೆ. ಸೂಕ್ಷ್ಮ ವಿಚಾರಗಳ ಬಗ್ಗೆಯೂ ಗಮನಹರಿಸುತ್ತಿದ್ದೇವೆ. ಈ ಸಿನಿಮಾ ಮೂಲಕ ಒಳ್ಳೆಯ ತಂಡ ಸಿಕ್ಕಿದೆ. ಎಲ್ಲರೂ ಕುಟುಂಬ ಸದಸ್ಯರ ತರಹ ಖುಷಿಯಾಗಿದ್ದೇವೆ.

 “ಜಾಗ್ವಾರ್‌’ ನೋಡಿದ ಜನ ಏನಂದ್ರು ನಿಮಗೆ?
 ಆ ಸಿನಿಮಾ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಬಂತು. ಮುಖ್ಯವಾಗಿ ನಮ್ಮ ತಂದೆಯನ್ನು ರಾಜಕೀಯದಲ್ಲಿ ಜನ ಒಪ್ಪಿಕೊಂಡಂತೆ “ಜಾಗ್ವಾರ್‌’ ಮೂಲಕ ಜನ ನನ್ನನ್ನು ಸಿನಿಮಾದಲ್ಲಿ ಒಪ್ಪಿಕೊಂಡಿದ್ದಾರೆ.

 “ಜಾಗ್ವಾರ್‌’ನಲ್ಲಿದ್ದ ಕೊರತೆ ಏನು?
 ನನಗೆ ಬಂದ ಪ್ರತಿಕ್ರಿಯೆ ಎಂದರೆ ನೇಟಿವಿಟಿ ಸಮಸ್ಯೆ. ಚಿತ್ರದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಕನ್ನಡದ ನೇಟಿವಿಟಿ ಇರಲಿಲ್ಲ ಎಂಬುದು. ಹಾಗಾಗಿ ಈ ಸಿನಿಮಾದಲ್ಲಿ ಕನ್ನಡದ ನೇಟಿವಿಟಿ ಇಟ್ಟುಕೊಂಡು ಮಾಡುತ್ತಿದ್ದೇವೆ.

 “ಜಾಗ್ವಾರ್‌’ನಲ್ಲಿ ಜನ ನಿಮ್ಮಿಂದ ಏನು ಇಷ್ಟಪಟ್ಟಿದ್ದರು?
ನನ್ನ ಡ್ಯಾನ್ಸ್‌ ಹಾಗೂ ಫೈಟ್‌ ಚೆನ್ನಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆ್ಯಕ್ಟಿಂಗ್‌ ವಿಷಯದಲ್ಲೂ ನಾನು ಸಾಕಷ್ಟು ಪರಿಶ್ರಮ ಪಟ್ಟಿದ್ದೆ. ಈ ಸಿನಿಮಾದಲ್ಲೂ ಅದು ಮುಂದುವರೆಯುತ್ತದೆ.

Advertisement

ಈ ಸಿನಿಮಾದಲ್ಲೂ ವಿದೇಶಿ ಲೊಕೇಶನ್‌ ಇರುತ್ತಾ?
ಇಲ್ಲಾ, ಇಡೀ ಸಿನಿಮಾ ಇಲ್ಲೇ ಆಗುತ್ತದೆ. ಕೆಲವು ದಿನ ರಾಜಸ್ತಾನ ಚಿತ್ರೀಕರಣ ಬಿಟ್ಟರೆ, ಉಳಿದಂತೆ ಇಡೀ ಸಿನಿಮಾ ಕರ್ನಾಟಕದಲ್ಲೇ ಆಗುತ್ತೆ. ಹಾಡುಗಳಿಗೂ ವಿದೇಶಕ್ಕೆ ಹೋಗುವುದಿಲ್ಲ.

 ರಾಜಕೀಯಕ್ಕೆ ಬರುತ್ತೀರಾ?
 ಖಂಡಿತಾ ಇಲ್ಲ, ನಾನು ಇಲ್ಲಿ ಖುಷಿಯಾಗಿದ್ದೇನೆ. ಜನ ಒಪ್ಪಿಕೊಂಡಿದ್ದಾರೆ. ಮುಂದೆ ಸಿನಿಮಾ ಮಾಡಿಕೊಂಡು ಇಲ್ಲೇ ಇರುತ್ತೇನೆ. ಅನೇಕರು ಭಾವಿಸಿದ್ದಾರೆ, ಸಿನಿಮಾ ಮೂಲಕ ರಾಜಕೀಯಕ್ಕೆ ಎಂಟ್ರಿಕೊಡುತ್ತಾನೆಂದು. ಆದರೆ ನಾನು, ತಂದೆ ಏನು ಮಾತನಾಡಿಕೊಂಡಿದ್ದೇವೆಂದು ನಮಗೇ ಗೊತ್ತು. ನಮ್ಮ ತಂದೆಯೇ ರಾಜಕೀಯದಲ್ಲಿ ಬೇಸತ್ತಿದ್ದಾರೆ. ನಾನು ರಾಜಕೀಯಕ್ಕೆ ಬರೋದಿಲ್ಲ.

ನಿಮ್ಮ ತಯಾರಿ ಹೇಗಿದೆ?
 ಡ್ಯಾನ್ಸ್‌, ಫೈಟ್‌ ಪ್ರಾಕ್ಟೀಸ್‌ ನಡೆಯುತ್ತಿದೆ. ಅದು ಬಿಟ್ಟರೆ ಈ ತಿಂಗಳು ವರ್ಕ್‌ಶಾಪ್‌ ನಡೆಯಲಿದೆ. ಚಿತ್ರದ ಪ್ರಮುಖ ದೃಶ್ಯಗಳನ್ನಿಟ್ಟುಕೊಂಡು ವರ್ಕ್‌ ಶಾಪ್‌ ಮಾಡುತ್ತಿದ್ದೇವೆ.

 ಕಥೆ ಬಗ್ಗೆ ಹೇಳಿ?
 ಈಗಲೇ ಕಥೆ ಬಗ್ಗೆ ಹೇಳ್ಳೋದು ಕಷ್ಟ. ತುಂಬಾ ಎಮೋಶನಲ್‌ ಆಗಿರುವಂತಹ ಫ್ಯಾಮಿಲಿ ಎಂಟರ್‌ಟೈನರ್‌.

ಈ ಕಥೆ ತೆಲುಗಿಗೆ ಹೊಂದುತ್ತಾ?
ಖಂಡಿತಾ ಹೊಂದುತ್ತೆ. ಎಮೋಶನ್‌ ಎಲ್ಲಾ ಕಡೆ ಒಂದೇ. “ಜಾಗ್ವಾರ್‌’ ತೆಲುಗು ನೇಟಿವಿಟಿ ಕನ್ನಡ ಸಿನಿಮಾವಾಗಿತ್ತು. ಇದು ಕನ್ನಡ ನೇಟಿವಿಟಿಯ ತೆಲುಗು ಸಿನಿಮಾವಾಗಲಿದೆ.

ನಾಯಕಿ ಹಾಗೂ ಬಜೆಟ್‌ ಬಗ್ಗೆ ಹೇಳಿ?
 ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. 500-600 ಫೋಟೋ ಬಂದಿದೆ. ಇನ್ನು, ಬಜೆಟ್‌ ಬಗ್ಗೆ ಪ್ಲ್ರಾನ್‌ ಮಾಡಿಲ್ಲ. ಕಥೆ ಏನು ಕೇಳುತ್ತೋ ಅದನ್ನು ಕೊಡುತ್ತೇವೆ.

 ಟೈಟಲ್‌ ಏನು?
ಇನ್ನೂ ಫಿಕ್ಸ್‌ ಆಗಿಲ್ಲ. ಎರಡೂ ಭಾಷೆಗೂ ಹೊಂದುವಂತಹ ಟೈಟಲ್‌ ಇಡುತ್ತಿದ್ದೇವೆ. ಈಗಾಗಲೇ ಒಂದು ಟೈಟಲ್‌ ಅಂದುಕೊಂಡಿದ್ದು, ಅದು ಬೇರೆ ಬ್ಯಾನರ್‌ನಲ್ಲಿದೆ. ಅದನ್ನು ಮನವಿ ಮಾಡಿ ಬಿಡಿಸಿಕೊಳ್ಳಬೇಕು.

 ಈ ಬಾರಿ ನಿರ್ಮಾಣದ ಜವಾಬ್ದಾರಿಯನ್ನೂ ನಿಮಗೆ ಬಿಟ್ಟಿದ್ದಾರಲ್ಲ?
 ಹೌದು, ತಂದೆಯವರು ರಾಜಕೀಯದಲ್ಲಿ ಬಿಝಿಯಾಗಿದ್ದಾರೆ. ಹಾಗಾಗಿ, ನಿರ್ಮಾಣದ ಜವಾಬ್ದಾರಿ ಕೂಡಾ ನಂದೆ. ಆದರೆ ಅಂತಿಮ ನಿರ್ಧಾರ ತಂದೆಯವರದ್ದೇ ಆಗಿರುತ್ತದೆ. ಏನೇ ಇದ್ದರೂ ಅವರಲ್ಲಿ ಕೇಳಿಯೇ ಮುಂದುವರೆಯುತ್ತೇನೆ. 

ನಿಮ್ಮ ಮದುವೆ ವಿಚಾರ ….?
ಅದು ತೀರಾ ವೈಯಕ್ತಿಕ. ನಾನೇನು ಹೇಳಲ್ಲ. ಸಮಯ ಬಂದಾಗ ನಿಮಗೇ ಎಲ್ಲಾ ಗೊತ್ತಾಗುತ್ತೆ. 

2018ರಿಂದ ಬೇರೆ ಬ್ಯಾನರ್‌ನಲ್ಲಿ ನಿಖಿಲ್‌ ಸಿನಿಮಾ

ನಿಖಿಲ್‌ನ ಎರಡನೇ ಸಿನಿಮಾದಲ್ಲಿ ಕನ್ನಡವರಿಗೆ ಅವಕಾಶ ಕೊಟ್ಟಿದ್ದೀರಿ. ತೆಲುಗು ಸಾಕು ಎನಿಸಿತಾ?
 ಇಲ್ಲಾ, ತೆಲುಗು ಸಾಕು ಎನಿಸಿದ್ದಲ್ಲ. ಮೊದಲ ಸಿನಿಮಾದಲ್ಲಿ ತೆಲುಗು ಕಲಾವಿದರು, ತಾಂತ್ರಿಕ ವರ್ಗದವರನ್ನು ಅನಿವಾರ್ಯವಾಗಿ ಹಾಕಬೇಕಾಯಿತು. ವಿಜಯೇಂದ್ರ ಪ್ರಸಾದ್‌ ಅವರಿಂದ ಕಥೆ ತಗೊಂಡ ಕಾರಣ ಅಂತಹ ಒಂದು ಅನಿವಾರ್ಯತೆ ಸೃಷ್ಟಿಯಾಯಿತು. ಅವರು ನಿಖಿಲ್‌ನನ್ನು ನೋಡಿ ತೆಲುಗಿನಲ್ಲೂ ಮಾಡುವ ಎಂದು ಸೂಚಿಸಿದರು. ಹಾಗಾಗಿ, ಬಹುತೇಕ ತೆಲುಗಿನವರನ್ನೇ ಬಳಸಿಕೊಳ್ಳಬೇಕಾಯಿತು.

 “ಜಾಗ್ವಾರ್‌’ನಿಂದ ನಿಮಗೆ ಸಿಕ್ಕ ಪ್ರತಿಕ್ರಿಯೆ ಏನು?
ಮೊದಲನೇಯದಾಗಿ ಹೆಚ್ಚು ತೆಲುಗಿನವರನ್ನು ಬಳಸಿದ್ದೀರಿ ಎಂದು ಅನೇಕರು ಹೇಳಿದರು. ಅದು ಬಿಟ್ಟರೆ ಸಿನಿಮಾ ತಾಂತ್ರಿಕವಾಗಿ ಸಿನಿಮಾ ತುಂಬಾ ಶ್ರೀಮಂತವಾಗಿದ್ದರೂ ನಮ್ಮ ನೇಟಿವಿಟಿಯಿಂದ ದೂರ ಇದೆ ಎಂದು ಸ್ವತಃ ನನಗೆ ಅನಿಸಿತು. ಆ ಕಾರಣದಿಂದ ಈ ಬಾರಿ ನಮ್ಮ ನೇಟಿವಿಟಿಗೆ ಹೆಚ್ಚಿನ ಒತ್ತು ಕೊಡಬೇಕೆಂಬ ಕಾರಣಕ್ಕೆ ಕನ್ನಡದವರಿಗೆ ಅವಕಾಶ ಕೊಟ್ಟಿದ್ದೇವೆ.

ಎರಡನೇ ಸಿನಿಮಾದಲ್ಲಿ ಸಂಪೂರ್ಣವಾಗಿ ಕನ್ನಡದವರನ್ನು ಬಳಸಿಕೊಳ್ಳುವ ನಿರ್ಧಾರ ನಿಮ್ಮದೋ,ನಿಖಿಲ್‌ ಅವರದೋ?
ನೇಟಿವಿಟಿ ವಿಚಾರದಿಂದಾಗಿ ನನಗೂ ಕನ್ನಡವರನ್ನು ಬಳಸಿಕೊಳ್ಳಬೇಕೆಂಬ ಆಸೆ ಇತ್ತು. ಮೊದಲ ಸಿನಿಮಾ ಆದ ನಂತರ ಅನೇಕ ತೆಲುಗು ನಿರ್ದೇಶಕರ ಜೊತೆ ಚರ್ಚೆಯೂ ಆಯಿತು. ಆದರೆ ಅದೊಂದು ದಿನ ನಿಖಿಲ್‌, ಅಪ್ಪ ಈ ಬಾರಿ ನಾವು ಸಂಪೂರ್ಣವಾಗಿ ಕನ್ನಡವರಿಗೆ ಅವಕಾಶ ಕೊಡಬೇಕೆಂದು ಹೇಳಿದ. ಆ ನಂತರ ಚೇತನ್‌ ಸೇರಿದಂತೆ ಕನ್ನಡದ ಅನೇಕ ಪ್ರತಿಭಾವಂತ ನಿರ್ದೇಶಕರ ಜೊತೆ ಚರ್ಚೆಯಾಗಿದೆ. ಅದರಲ್ಲಿ ಮೊದಲು ಚೇತನ್‌ ಕಥೆ ಫೈನಲ್‌ ಆಗಿದೆ. ಮುಂದೆ ಇತರ ನಿರ್ದೇಶಕರ ಜೊತೆಯೂ ಸಿನಿಮಾ ಮಾಡುತ್ತೇವೆ. 

ನಿರ್ಮಾಪಕರಾಗಿ ಕಥೆ ಬಗ್ಗೆ ಏನು ಹೇಳುತ್ತೀರಿ?
ಇದೊಂದು ಪಕ್ಕಾ ಫ್ಯಾಮಿಲಿ ಓರಿಯೆಂಟೆಡ್‌ ಸಬೆjಕ್ಟ್.”ಜಾಗ್ವಾರ್‌’ ಒಂದು ಆ್ಯಕ್ಷನ್‌ ಸಿನಿಮಾವಾಗಿತ್ತು. ಅಲ್ಲಿ ಸೆಂಟಿಮೆಂಟ್‌ ಮಿಸ್‌ ಆಗಿತ್ತು ಎಂದು ಸ್ವತಃ ನನಗೆ ಅನಿಸಿತು. ಆದರೆ ಆ ಕೊರತೆಯನ್ನು ಈ ಸಿನಿಮಾದಲ್ಲಿ ನೀಗಿಸುತ್ತಿದ್ದೇವೆ. ಇಲ್ಲಿ ನಮ್ಮ ತನವಿದೆ, ಸೊಗಡಿದೆ. “ಸೂರ್ಯವಂಶ’, “ಚಂದ್ರಚಕೋರಿ’ ತರಹದ ಪವರ್‌ಫ‌ುಲ್‌ ಕಥೆ. ಒಂದು ದೊಡ್ಡ ಇತಿಹಾಸವಿರುವ ಕುಟುಂಬವೊಂದರ ಹಿನ್ನೆಲೆಯಿಂದ ಕಥೆ ಆರಂಭವಾಗುತ್ತದೆ. ನಿರ್ದೇಶಕ ಚೇತನ್‌, ಕ್ರಿಯಾಶೀಲ ವ್ಯಕ್ತಿ. ಕಥೆಯನ್ನು ತುಂಬಾ ಚೆನ್ನಾಗಿ ಕೂರಿಸಿದ್ದಾರೆ.

ಕಥೆಯಲ್ಲಿ ನಿಮ್ಮ ಸಲಹೆ- ಸೂಚನೆ ಏನು?
 “ಜಾಗ್ವಾರ್‌’ ಸಿನಿಮಾ ನೋಡಿದವರು, “ಸೂರ್ಯವಂಶ’, “ಚಂದ್ರಚಕೋರಿ’ ತರಹದ ಹಾಡು ಬೇಕಿತ್ತು ಎಂದು ಹೇಳಿದ್ದರು. ಅದನ್ನು ಈ ಸಿನಿಮಾದಲ್ಲಿ ಕೊಡಲು ಪ್ರಯತ್ನಿಸುತ್ತಿದ್ದೇವೆ. “ಸೂರ್ಯವಂಶ’, “ಚಂದ್ರಚಕೋರಿ’ ಚಿತ್ರಗಳಲ್ಲಿ ಒಂದು ಹಾಡು ರಿಪೀಟ್‌ ಇತ್ತು. ಜನ ಅದನ್ನು ಇಷ್ಟಪಟ್ಟಿದ್ದರು. ಈ ಸಿನಿಮಾದಲ್ಲೂ ಖುಷಿ ಹಾಗೂ ದುಃಖದ ಸನ್ನಿವೇಶದಲ್ಲಿ ಒಂದು ಹಾಡು ರಿಪೀಟ್‌ ಆಗಲಿದೆ.

ಕಲೆಕ್ಷನ್‌ ವಿಷಯದಲ್ಲಿ “ಜಾಗ್ವಾರ್‌’ ತೃಪ್ತಿ ಕೊಟ್ಟಿದೆಯಾ?
 ಖಂಡಿತಾ, ನಾನು ಟೋಟಲಿ ಹ್ಯಾಪಿ. ನನಗೆ ಕಲೆಕ್ಷನ್‌ಗಿಂತ ಅವನು ಸ್ಟಾಂಡ್‌ ಆಗಬೇಕೆಂದಿತ್ತು. ಒಬ್ಬ ಮೊದಲ ಸಿನಿಮಾದ ನಾಯಕನಿಗೆ ಆ ಮಟ್ಟದ ಕಲೆಕ್ಷನ್‌, ಓಪನಿಂಗ್‌ ಸಿಗೋದು ಸುಲಭದ ಮಾತಲ್ಲ. ಸಿನಿಮಾಕ್ಕೆ ಒಳ್ಳೆಯ ಕಲೆಕ್ಷನ್‌ ಆಗಿದೆ. ನಾವು “ಜಾಗ್ವಾರ್‌’ ಸಿನಿಮಾ ಬಿಡುಗಡೆ ಮಾಡಿದ ಸಮಯದಲ್ಲೇ ಹಿಂದೆ-ಮುಂದೆ ದೊಡ್ಡ ದೊಡ್ಡ ಸಿನಿಮಾಗಳು ಬಂದುವು, ಥಿಯೇಟರ್‌ ಸಮಸ್ಯೆ ಕೂಡಾ ಎದುರಾಯಿತು. ಇಲ್ಲದಿದ್ದರೆ ಕಲೆಕ್ಷನ್‌ ಇನ್ನೂ ಜೋರಾಗಿರುತ್ತಿತ್ತು. 

 “ಜಾಗ್ವಾರ್‌’ ಸಮಯದಲ್ಲಿ ನೀವು ಥಿಯೇಟರ್‌ ಸಮಸ್ಯೆ ಬಗ್ಗೆ ಧ್ವನಿ ಎತ್ತಿದಿರಿ. ಆ ನಂತರ ಸುಮ್ಮನಾಗಿದ್ದು ಯಾಕೆ?
ಇಲ್ಲ ನಾನು ಸುಮ್ಮನಾಗಿಲ್ಲ. ಥಿಯೇಟರ್‌ ಸಮಸ್ಯೆ ಫಿಲಂ ಚೇಂಬರ್‌ನಡಿ ಸರಿಪಡಿಸಬೇಕು. ಜೊತೆಗೆ ಸರ್ಕಾರದ ಮಟ್ಟದಲ್ಲಿ ಅವೆಲ್ಲದಕ್ಕೂ ಒಂದು ರೂಪುರೇಷೆ ಸಿದ್ಧಪಡಿಸಿ ಸರಿಪಡಿಸಬೇಕು. ಆ ಸಮಯದಲ್ಲಿ ನಾನು ಮತ್ತೆ ರಾಜಕೀಯದಲ್ಲಿ ಬಿಝಿಯಾದೆ. ಮುಂದೆ ನಮ್ಮ ಸರ್ಕಾರ ಬರುತ್ತೆ, ಎಲ್ಲವನ್ನು ಸರಿಪಡಿಸುವ.

 ಈ ಚಿತ್ರದ ಬಜೆಟ್‌ ಎಷ್ಟು?
 ಇನ್ನೂ ನಿಖರವಾಗಿ ಹೇಳುವಂತಿಲ್ಲ, 12 ರಿಂದ 15 ಕೋಟಿ ರೂ. ಆಗಬಹುದು. ಮತ್ತೆ ನಿರ್ದೇಶಕರ ಕಲ್ಪನೆ ಮೇಲೆ ಹೋಗುತ್ತದೆ.

 ಮಗನನ್ನು ರಾಜಕೀಯಕ್ಕೆ ತರುವ ಆಲೋಚನೆ ಇದೆಯಾ?
ಮಗ ರಾಜಕೀಯಕ್ಕೆ ಬರೋದು ನನಗೆ ಇಷ್ಟವಿಲ್ಲ. ಆ ಕಾರಣದಿಂದಲೇ ಅವನನ್ನು ಈ ಕಡೆಗೆ ಶಿಫ್ಟ್ ಮಾಡಿದ್ದು.

ನಿಖಿಲ್‌ನನ್ನು ಬೇರೆ ನಿರ್ಮಾಪಕರಿಗೆ ಬಿಟ್ಟುಕೊಡೋದು ಯಾವಾಗ?
 2018ಕ್ಕೆ ಬಿಟ್ಟುಕೊಡುತ್ತೇನೆ. ಮೊದಲು ಅವನ ಮಾರ್ಕೇಟ್‌ ಅನ್ನು ನಾನು ಫ‌ೂÅವ್‌ ಮಾಡಬೇಕು. ಇವನನ್ನು ಹಾಕಿಕೊಂಡರೆ ಇಷ್ಟು ಬಿಝಿನೆಸ್‌ ಆಗುತ್ತೆ ನಿರ್ಮಾಪಕರಿಗೆ ಗೊತ್ತಾಗಬೇಕು. ಆ ಕೆಲಸ ಈಗ ಆಗುತ್ತಿದೆ. ಕಥೆ ವಿಷಯದಲ್ಲಿ ಮಾತ್ರ ಮುಂದೆಯೂ ಕಾಂಪ್ರಮೈಸ್‌ ಆಗಲ್ಲ.

 ಮಲ್ಟಿಪ್ಲೆಕ್ಸ್‌ ಟಿಕೆಟ್‌ ಬೆಲೆ ಕಡಿಮೆಯಾದ ಬಗ್ಗೆ?
ಮಲ್ಟಿಪ್ಲೆಕ್ಸ್‌ಗೆ ಸಿನಿಮಾ ನೋಡಲು ಹೋಗುವವರು ಸ್ಥಿತಿವಂತರೇ ಹೊರತು ಸಾಮಾನ್ಯದವರಲ್ಲ. ಅವರು 50-100ಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಬೆಲೆ ಕಡಿಮೆಯಾಗಿದ್ದರಿಂದ ನಮಗೆ ಆಡಿಯನ್ಸ್‌ ಜಾಸ್ತಿ ಬರುತ್ತಾರೆ ಅನ್ನೋದು ಸುಳ್ಳು. ಸಿನಿಮಾ ಚೆನ್ನಾಗಿದ್ದರೆ ಮಾತ್ರ ಜನ ಬರುತ್ತಾರೆ.

ಚುನಾವಣಾ ಪ್ರಚಾರಕ್ಕೆ ಸಿನಿಮಾದವರು ಬರುತ್ತಾರಾ?
ಇಲ್ಲ, ನಾನು ಯಾರನ್ನೂ ಮಿಸ್‌ಯೂಸ್‌ ಮಾಡಿಕೊಂಡಿಲ್ಲ, ಮಾಡಿಕೊಳ್ಳೋದು ಇಲ್ಲ.

ಪವನ್‌ ಕಲ್ಯಾಣ್‌ ಬರುತ್ತಾರೆಂಬ ಸುದ್ದಿ ಇದೆ?
 ಪವನ್‌ ಕಲ್ಯಾಣ್‌ಗೆ ರಾಜಕೀಯದಲ್ಲಿ ತುಂಬಾ ಆಸಕ್ತಿ ಇದೆ. ಈಗಾಗಲೇ ಪಕ್ಷ ಕೂಡಾ ಕಟ್ಟಿದ್ದಾರೆ. ಅವರನ್ನು ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ತೆಲುಗು ಪ್ರಭಾವ ಜಾಸ್ತಿ ಇರುವ ಕಡೆ ಬಳಸಿಕೊಳ್ಳುವ ಆಲೋಚನೆ ಇದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next