ಬೆಂಗಳೂರು: ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಬಿಜೆಪಿ ಪ್ರಯತ್ನ ಮಾಡಿದ ಬಗ್ಗೆ ವಿಚಾರಕ್ಕೆ ನನಗೆ ಆಶ್ಚರ್ಯ ಏನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಪಂಚರತ್ನ ಯಾತ್ರೆಗೆ ಚಾಲನೆ ನೀಡಿದ ವೇಳೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪಾಪದ ಹಣ ಇಟ್ಟುಕೊಂಡು ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿದರು. ಇದೇ ಪಾಪದ ಹಣದಲ್ಲಿ ಬೇರೆ ಬೇರೆ ರಾಜ್ಯದಲ್ಲೂ ಮಾಡಿ ಯಶಸ್ವಿಯಾಗಿದ್ದಾರೆ. ಈಗ ತೆಲಂಗಾಣದಲ್ಲಿ ಕೂಡ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಪ್ರಧಾನಿ ಮೋದಿ, ಯೋಗಿ ವಿರುದ್ಧ ದ್ವೇಷ ಭಾಷಣ ಪ್ರಕರಣ-ಅಜಂ ಖಾನ್ ದೋಷಿ, 3ವರ್ಷ ಜೈಲು; ಕೋರ್ಟ್
ತೆಲಂಗಾಣದಲ್ಲಿ ಅಷ್ಟು ಸುಲಭವಾಗಿ ಅಕ್ರಮ ಹಣದಿಂದ ಸರ್ಕಾರವನ್ನು ಅಸ್ಥಿರಗೊಳಿಸುವುದು ಅಸಾಧ್ಯ. ಇವತ್ತು ನೇರವಾಗಿ 17 ಕೋಟಿ ಹಣದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು ಯಾಕೆ ಜಾಣ ಮೌನ ತಾಳಿದ್ದಾರೆ. ಪ್ರಧಾನಿ ಹಾಗೂ ಇಡಿಯವರು ಇದಕ್ಕೆ ಉತ್ತರ ಕೊಡಬೇಕಿದೆ. ಈ ಹಣ ಎಲ್ಲಿಂದ ಹೇಗೆ ಬಂತು ಎಂಬುದರ ಬಗ್ಗೆ ಹೇಳಬೇಕೆಂದು ಒತ್ತಾಯಿಸಿದರು.
ಇಂಥ ಕೆಲಸಗಳು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಸಂವಿಧಾನವೇ ಬುಡಮೇಲು ಆಗುವ ಅಪಾಯವಿದೆ. ಬಿಜೆಪಿ ಹೋಗುತ್ತಿರುವ ದಾರಿ ಸರಿಯಲ್ಲ. ಇದು ಆ ಪಕ್ಷಕ್ಕೆ ತಿರುಗುಬಾಣ ಆಗುವುದು ಖಚಿತ ಎಂದು ಎಚ್ ಡಿಕೆ ಅಭಿಪ್ರಾಯಪಟ್ಟರು.