Advertisement

14ನೇ ಬಜೆಟ್ ಮಂಡಿಸಲು ಸಿದ್ಧವಾಗಿರುವ ಆರ್ಥಿಕಜ್ಞಾನಿಗೆ ಗ್ಯಾರಂಟಿಜಾರಿ ಹೇಗೆಂದು ಗೊತ್ತಿಲ್ವಾ?

05:30 PM Jun 06, 2023 | Team Udayavani |

ಬೆಂಗಳೂರು: ಉಚಿತ, ಖಚಿತ ಎಂದು ಸುಳ್ಳು ಹೇಳಿಕೊಂಡು ಓಡಾಡಿ ಅಧಿಕಾರಕ್ಕೆ ಬಂದವರು, ಇವತ್ತು ಜನರನ್ನು ವಿದ್ಯುತ್ ದುರ್ಬಳಕೆ ಮಾಡಿಕೊಳ್ಳಲು ಪ್ರತಿಪಕ್ಷಗಳು ಪ್ರಚೋದಿಸುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು.

Advertisement

ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರ ಸಮಕ್ಷಮದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯುತ್ ಬಳಕೆ ಬಗ್ಗೆ ವಿರೋಧ ಪಕ್ಷಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದ್ದೇನೆ. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರನ್ನು ಎತ್ತಿಕಟ್ಟುತ್ತಿವೆ ಅಂತ ಅವರು ಹೇಳಿದ್ದಾರೆ. ಅಂತಹ ಹೇಳಿಕೆ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ ಎಂದು ಅವರು ಕಿಡಿಕಾರಿದರು.

ಇದಕ್ಕೆಲ್ಲಾ ವೇದಿಕೆ ಸಿದ್ದ ಮಾಡಿಕೊಟ್ಟಿದ್ದೇ ನೀವು. ರಾಜ್ಯದ ಜನಕ್ಕೆ ಗ್ಯಾರಂಟಿ ಬಗ್ಗೆ ಸಹಿ ಮಾಡಿ ಕೊಟ್ಟಿದ್ದೀರಿ. ಸುಳ್ಳು ಹೇಳಿ ಮತ ಪಡೆದಿರಿ. ಈಗ ನಿಮಗೆ ಅದರ ಸಾಧಕ ಬಾಧಕ ಅರ್ಥವಾಗುತ್ತಿದೆ. ಮೊದಲೇ ಈ ಬಗ್ಗೆ ಯೋಚನೆ ಮಾಡಿರಲಿಲ್ಲವಾ? ಪರಿಜ್ಞಾನ ಇರಲಿಲ್ಲವಾ? ಈಗ ಷರತ್ತು ಎನ್ನುತ್ತಿದ್ದಾರೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಅವರು ಖಾರವಾಗಿ ಅವರು ಪ್ರಶ್ನಿಸಿದರು.

ಈಗಿನ ಮುಖ್ಯಮಂತ್ರಿಗಳು ಸರ್ವವನ್ನೂ ಬಲ್ಲವರು. ಈಗಾಗಲೇ 13 ಬಜೆಟ್ ಗಳನ್ನು ಮಂಡಿಸಿದ್ದಾರೆ. ಇನ್ನೇನು 14ನೇ ಬಜೆಟ್ ಅನ್ನೂ ಮಂಡಿಸಲಿದ್ದಾರೆ. ರಾಜ್ಯದ ಹಣಕಾಸು ಬಗ್ಗೆ, ಆರ್ಥಿಕತೆ ಬಗ್ಗೆ ಅವರಿಂತ ಬಲ್ಲ ಜ್ಞಾನಿಗಳು ಯಾರಿದ್ದಾರೆ? ಮುಂದೇನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿರಬೇಕು. ಅದು ಬಿಟ್ಟು ಜನರನ್ನು ಪ್ರತಿಪಕ್ಷಗಳು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next