ಬೆಂಗಳೂರು: ಕಾಂಗ್ರೆಸ್ ಜತೆಗಿನ ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕಗ್ಗಂಟಾಗಿರುವ ಬೆನ್ನಲ್ಲೇ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುರುವಾರ ದಿಢೀರ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು.
ಪದ್ಮನಾಭನಗರ ನಿವಾಸಕ್ಕೆ ಆಗಮಿಸಿದ ಕುಮಾರಸ್ವಾಮಿ ಸುಮಾರು ಒಂದೂವರೆ ಗಂಟೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು. ಪ್ರಮುಖವಾಗಿ ಲೋಕಸಭೆ ಚುನಾವಣೆ ಸೀಟು ಹಂಚಿಕೆ, ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿರು ವುದು ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.
ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಜತೆ ಮಾತನಾಡಿ ಫೈನಲ್ ಮಾಡುವುದು ಸೂಕ್ತ. ಕಾಂಗ್ರೆಸ್ ಬಿಟ್ಟುಕೊಟ್ಟಷ್ಟು ಕ್ಷೇತ್ರಗಳಲ್ಲಿ ಮಾತ್ರ ನಾವು ಸ್ಪರ್ಧೆ ಮಾಡಬೇಕು ಎಂಬುದು ಸರಿಯಲ್ಲ ಎಂದು ಕುಮಾರಸ್ವಾಮಿ, ದೇವೇ ಗೌಡರ ಬಳಿ ಹೇಳಿದರು ಎನ್ನಲಾಗಿದೆ. ಕಾಂಗ್ರೆಸ್ ನಾಯಕರೇ ಸುಮಲತಾ ಅವರನ್ನು ಚುನಾವಣೆ ಕಣಕ್ಕೆ ಇಳಿಯುವಂತೆ ಒತ್ತಡ ಹೇರಿ ಸಿದ್ದರಾಮಯ್ಯ ಬಳಿಯೂ ಕಳುಹಿಸಿದ್ದಾರೆ. ಸ್ಪತಂತ್ರವಾಗಿ ಕಣಕ್ಕಿಳಿಸುವ ಪ್ರಯತ್ನವೂ ನಡೆದಿದೆ ಎಂದು ಮಂಡ್ಯ ಜಿಲ್ಲಾ ಮುಖಂಡರುನೀಡಿರುವ ಮಾಹಿತಿ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು ಎನ್ನಲಾಗಿದೆ.
ನಾಳೆ ಮತ್ತೆ ಸಭೆ
ಮೂಲಗಳ ಪ್ರಕಾರ, ಸೀಟು ಹಂಚಿಕೆ ಸಂಬಂಧ ಶನಿವಾರ ದೇವೇಗೌಡರ ಜತೆ ಮಾಜಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಮಾತುಕತೆ ನಡೆಸಲಿದ್ದಾರೆ. ಮುಂದಿನ ವಾರ ರಾಹುಲ್‌ಗಾಂಧಿ ಹಾಗೂ ದೇವೇಗೌಡರ ನಡುವೆ ಅಂತಿಮ ಮಾತುಕತೆ ನಡೆಯಲಿದೆ ಎಂದು ಹೇಳಲಾಗಿದೆ.