Advertisement

ಬೆಲೆ ಏರಿಕೆ ಹೊಡೆತಕ್ಕೆ ಜನ ತತ್ತರಿಸುತ್ತಿರುವುದು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ:HDK ಕಿಡಿ

04:55 PM Jun 26, 2023 | Team Udayavani |

ಬೆಂಗಳೂರು: ಆಹಾರ ಪದಾರ್ಥಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದ್ದರೂ ಅದಕ್ಕೆ ನಿಯಂತ್ರಣ ಹಾಕದ ರಾಜ್ಯ ಕಾಂಗ್ರೆಸ್ ಸರಕಾರ ಮೇಲೆ ಟೀಕಾಪ್ರಹಾರ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಸರಕಾರ ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಿಗೆಟ್ಟ ವರನಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಮಾಧ್ಯಮಗಳ ವರದಿಯನ್ನು ಉಲ್ಲೇಖಸಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಐದು ಗ್ಯಾರಂಟಿಗಳಿಂದ ಜನೋದ್ಧಾರ ಗ್ಯಾರಂಟಿ ಎಂದು ಹಸಿಸುಳ್ಳು ಹೇಳಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಗೆಟ್ಟ ವರನಂತೆ ವರ್ತಿಸುತ್ತಿದೆ. ಬೆಲೆ ಏರಿಕೆ ಹೊಡೆತಕ್ಕೆ ಜನ ತತ್ತರಿಸುತ್ತಿರುವುದು ಅದರ ಕಣ್ಣಿಗೆ ಕಾಣುತ್ತಿಲ್ಲ ಎಂದಿರುವ ಅವರು, ‘ ಜನರಿಗೆ ಬೆಲೆ ಏರಿಕೆ ಗ್ಯಾರಂಟಿ ‘ ಎಂದು ಹ್ಯಾಷ್ ಟ್ಯಾಗ್ ಮಾಡಿದ್ದಾರೆ.

ನನಗೂ ಫ್ರೀ, ನಿನಗೂ ಫ್ರೀ ಎಂದು ಗ್ಯಾರಂಟಿ ಜಾಗಟೆ ಹೊಡೆದ ಈ ಸರಕಾರಕ್ಕೆ ಮಾರುಕಟ್ಟೆಯಲ್ಲಿ ಗಗನಮುಖಿಯಾದ ಆಹಾರ ಪದಾರ್ಥಗಳ ಬೆಲೆ ಮೇಲೆ ನಿಯಂತ್ರಣವೇ ಇಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳು ಜನರ ಕಣ್ಣೀರಿನಲ್ಲಿ ಗೆಣಸು ಬೇಯಿಸಿಕೊಳ್ಳುತ್ತಿವೆ. ಅವರಿಗೆ ಬೆಲೆ ಇಳಿಕೆ ಬಗ್ಗೆ ಚಿಂತನೆಯೇ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಈ ಸರಕಾರ ಬಂದು ತಿಂಗಳ ಮೇಲಾಯಿತು. ಅಧಿಕಾರ ಸಿಕ್ಕ ಕೂಡಲೇ ವರ್ಗಾವಣೆ ದಂಧೆಯ ದಾಸ್ಯಕ್ಕೆ ಬಿದ್ದ ಸರಕಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಹೋಗುತ್ತಿರುವ ಬೆಲೆಗಳ ಬಗ್ಗೆ, ಆಹಾರ ಪದಾರ್ಥಗಳ ದುಬಾರಿ ಬಗ್ಗೆ ಗಮನ ಹೋಗಲೇ ಇಲ್ಲ. ಹಣದ ಹಪಾಹಪಿ ಭಾಗ್ಯಗಳನ್ನು ಬಲಿ ತೆಗೆದುಕೊಳ್ಳುವ ದುಸ್ಥಿತಿಗೆ ದೂಡಿದೆ ಎಂದು ಅವರು ದೂರಿದ್ದಾರೆ.

Advertisement

ಇದನ್ನೂ ಓದಿ:ಬಂಕ್ ಮಾಲಿಕನಿಗೆ ಲಕ್ಷಾಂತರ ರೂ ಬಾಕಿ: ವ್ಯಕ್ತಿಯನ್ನು ಅರೆಬೆತ್ತಲೆ ಕೂರಿಸಿದ ಬಂಕ್ ಮ್ಯಾನೇಜರ್

ಬೆಲೆ ಏರಿಕೆ ಪಟ್ಟಿ ಓದಿದರೆ ಎದೆ ನಡುಗುತ್ತದೆ. ಅಕ್ಕಿ ಬೆಲೆ ಕೆಜಿಗೆ ಸರಾಸರಿ ₹20 ಏರಿದ್ದರೆ, ಕೆಜಿ ಟೊಮ್ಯಾಟೋ ಬೆಲೆ ₹100 ಮುಟ್ಟಿದೆ. ಈ ಏರಿಕೆ ಲಾಭ ಅತ್ತ ರೈತನಿಗೂ ಇಲ್ಲ, ಇತ್ತ ಗ್ರಾಹಕನಿಗೂ ಇಲ್ಲ. ಜನ ಬೆಲೆ ಬೆಂಕಿಯಲ್ಲಿ ಬೇಯುತ್ತಿದ್ದರೆ ಈ ಸರಕಾರ ಆ ಬೇಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದೆ, ಹೊಸ ಹುಂಡಿಗಳಿಗೆ ಜಾಗ ಹುಡುಕುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಪಕ್ಷವು, ತಾನು ಕೊಟ್ಟ ಭರವಸೆಗಳ ಬಗ್ಗೆ ಉತ್ತರ ಹೇಳಲಿ? ಬೆಲೆಗಳ ಇಳಿಕೆಯ ಬಗ್ಗೆ ಹೇಳಿದ್ದೆಲ್ಲ ಎಲ್ಲಿ ಹೋಯಿತು? ಮತ ಪಡೆದ ಮೇಲೆ ಎಲ್ಲಾ ಮರೆತು ಹೋಯಿತಾ? 135 ಸೀಟು ಸಿಕ್ಕಿದ ಮೇಲೆ ಪ್ರಣಾಳಿಕೆ ಪುಸ್ತಕಕ್ಕೆ ಮೂವತ್ತೇ ದಿನದಲ್ಲಿ ಗೆದ್ದಲು ಹಿಡಿಯಿತಾ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ನುಡಿದಂತೆ ನಡೆದಿದ್ದೇವೆ ಎಂದಿರಿ, ನುಡಿದಂತೆ ಎಲ್ಲಿ ನಡೆದಿದ್ದೀರಿ? ನುಡಿದಂತೆ ನಡೆದಿದ್ದೇವೆ ಎಂದರೆ ಲಂಗೂ ಲಗಾಮು ಇಲ್ಲದೆ ಬೆಲೆಗಳನ್ನು ಆಕಾಶಕ್ಕೆ ಜಿಗಿಸುವುದಾ? ಮಾರುಕಟ್ಟೆಯ ದಲ್ಲಾಳಿಗಳಿಗೆ ಶಕ್ತಿ ತುಂಬುವುದಾ? ಶಕ್ತಿ ಯೋಜನೆ ಮೂಲಕ ಮಹಿಳೆಯರ ಗಮನ ಬೇರೆಡೆಗೆ ಸೆಳೆದು, ಅವರ ಅಡುಗೆ ಮನೆ ಬಜೆಟ್ ಗೆ ಕೊಳ್ಳಿ ಇಡುವುದಾ? ಎಂದು ಅವರು ಸರಕಾರವನ್ನು ಕೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಹೊಸ ಗ್ಯಾರಂಟಿಗಳು ಹೀಗಿವೆ ಎಂದು ಟಾಂಗ್ ನೀಡಿರುವ ಅವರು ಸರಕಾರದ ಹೊಸ 5 ಗ್ಯಾರಂಟಿಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ.

1.ಅಕ್ಕಿಭಾಗ್ಯ ಹಗಲು ಕನಸು, ಬೆಲೆ ಏರಿಕೆ ಕನಸು ನನಸು!

2.ಗೃಹಜ್ಯೋತಿ ಈಗ ಸುಡುಜ್ಯೋತಿ!

3.ಶಕ್ತಿ ಯೋಜನೆಯಿಂದ ಸಾರಿಗೆ ವ್ಯವಸ್ಥೆಯಲ್ಲಿ ಅರಾಜಕತೆ!

4.ಗೃಹಲಕ್ಷ್ಮಿಗೆ ಗ್ರಹಣ!

5.ನಿದಿರೆಗೆ ಜಾರಿದೆ ಯುವನಿಧಿ!

ಕಾಂಗ್ರೆಸ್ ಸರಕಾರ ಸುಳ್ಳು ಹೇಳಿದ್ದು ಸಾಕು, ಇನ್ನಾದರೂ ಏರಿದ ಬೆಲೆ ಕಡಿತಕ್ಕೆ ಕ್ರಮ ಕೈಗೊಳ್ಳಲಿ. ಇಲ್ಲವಾದರೆ ರಾಜ್ಯದ ನಾರಿಶಕ್ತಿ ಆಕ್ರೋಶಕ್ಕೆ ನೀವು ನಾಮಾವಶೇಷ ಇಲ್ಲದಂತೆ ಹೋಗುತ್ತೀರಿ. ಎಚ್ಚರ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿಕೆ ಈ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next