Advertisement

ತ್ರಿಮೂರ್ತಿಗಳಿಗೆ ಇನ್ನು ಫ‌ಲಿತಾಂಶ ಆತಂಕ

06:00 AM Nov 05, 2018 | Team Udayavani |

ಬೆಂಗಳೂರು:ಉಪ ಚುನಾವಣೆಯ ಮತದಾನ ಮುಗಿದ ನಂತರ ಫ‌ಲಿತಾಂಶದ ಆತಂಕ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯಲ್ಲಿ ಮನೆ ಮಾಡಿದ್ದು, ಐದು ಕ್ಷೇತ್ರಗಳ ಫ‌ಲಿತಾಂಶದ ಮೇಲೆ ಸಮ್ಮಿಶ್ರ ಸರ್ಕಾರದ ಸುಭದ್ರತೆಯೂ ನಿಂತಿರುವುದರಿಂದ ಮೂರೂ ಪಕ್ಷಗಳ ನಾಯಕರೂ ತಲೆಕಡಿಸಿಕೊಳ್ಳುವಂತಾಗಿದೆ.

Advertisement

ಮತದಾನದ ನಂತರದ ಆಂತರಿಕ ಸಮೀಕ್ಷೆ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿ ನಾಯಕರಲ್ಲಿ ಒಂದು ರೀತಿಯ ತಳಮಳ ಸೃಷ್ಟಿಸಿದೆ. ಏಕೆಂದರೆ, ಮತದಾನದ ಹಿಂದಿನ ದಿನದವರೆಗೂ ಇದ್ದ ಧೈರ್ಯವೇ ಬೇರೆ. ಮತದಾನ ಮುಗಿದ ನಂತರ ಬರುತ್ತಿರುವ ಮಾಹಿತಿಯೇ ಬೇರೆ ಎಂಬಂತಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗ ವಿಚಾರದಲ್ಲಿ ಖುದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಳ್ಳಾರಿ ವಿಚಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌, ಜಮಖಂಡಿ ವಿಚಾರದಲ್ಲಿ ಸಿದ್ದರಾಮಯ್ಯ ತಲೆಬಿಸಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಸಹ  ಉಪ ಚುನಾವಣೆ ಫ‌ಲಿತಾಂಶದತ್ತ ಚಿತ್ತ ಹರಿಸಿದ್ದು, ಶಿವಮೊಗ್ಗ,ಬಳ್ಳಾರಿ, ಮಂಡ್ಯ ಕ್ಷೇತ್ರಗಳ ಫ‌ಲಿತಾಂಶದ ಆಧಾರದ ಮೇಲೆಯೇ ಮುಂದಿನ ಲೋಕಸಭೆ ಚುನಾವಣೆಯ ಮೈತ್ರಿ ನಿರ್ಧಾರವಾಗಲಿದೆ. ನಿರೀಕ್ಷಿತ ಫ‌ಲಿತಾಂಶ ಬಾರದಿದ್ದರೆ ಮೈತ್ರಿಯ ಬಗ್ಗೆ ವಿರೋಧ ವ್ಯಕ್ತವಾಗುವ ಸಾಧ್ಯತೆಯೂ ಇದೆ.

ಹೀಗಾಗಿ, ಈ ಫ‌ಲಿತಾಂಶವು ರಾಜ್ಯದಲ್ಲಿ ಮತ್ತೂಂದು ಹಂತದ ಧ್ರುವೀಕರಣಕ್ಕೆ ಕಾರಣವಾಗಬಹುದು ಎಂಬ ವಿಶ್ಲೇಷಣೆಗಳ ಹಿನ್ನೆಲೆಯಲ್ಲಿ ಏನಾಗುತ್ತೋ ಎಂಬ “ಭಯ’ ಇರುವುದಂತೂ ನಿಜ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಾಧನೆ ಆಧಾರದಲ್ಲಿ  ಈ ಚುನಾವಣೆ ನಡೆದಿಲ್ಲ. ಆದರೂ ಫ‌ಲಿತಾಂಶದ ಆಧಾರದ ಮೇಲೆ ಮೂರೂ ಪಕ್ಷಗಳಲ್ಲಿ ಒಂದಷ್ಟು ಬದಲಾವಣೆಗಳು ನಡೆಯಲಿದೆ ಎಂದು ಹೇಳಲಾಗಿದೆ.

ತಳಮಳಕ್ಕೆ ಕಾರಣ
ಜೆಡಿಎಸ್‌ಗೆ ರಾಮನಗರ ಹಾಗೂ ಮಂಡ್ಯ ಕ್ಷೇತ್ರದಲ್ಲಿ ನಿರಾಳ. ಹೀಗಾಗಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಶಿವಮೊಗ್ಗ ಕ್ಷೇತ್ರದ ಫ‌ಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಕೆಡವಲು ಆಪರೇಷನ್‌ ಕಮಲ ಕಾರ್ಯಾಚರಣೆಗೆ ಬ್ರೇಕ್‌ ಹಾಕುವ ದೃಷ್ಟಿಯಿಂದ ರಾಜಕೀಯವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಕಾರ್ಯತಂತ್ರ ರೂಪಿಸಿ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಿದ್ದರು.  ಈಡಿಗ, ಮುಸ್ಲಿಂ, ದಲಿತ ಮತಗಳ ಕ್ರೂಢೀಕರಣದ ತಂತ್ರಗಾರಿಕೆ ಫ‌ಲ ಕೊಡುತ್ತಾ ಎಂಬುದಕ್ಕೆ ಫ‌ಲಿತಾಂಶ  ಉತ್ತರಿಸಲಿದೆ.

Advertisement

ಇನ್ನು, ಯಡಿಯೂರಪ್ಪ ಅವರೂ ಶಿವಮೊಗ್ಗ ಕ್ಷೇತ್ರದಲ್ಲಿ ತನ್ನೆಲ್ಲಾ ರಾಜಕೀಯ ಪಟ್ಟುಗಳನ್ನು ಹಾಕಿ ಮಗನ ಗೆಲುವಿಗೆ ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಮತದಾನದ ನಂತರ ಬಿಜೆಪಿ ವಲಯದಲ್ಲಂತೂ ಸಮಾಧಾನದ ವಾತಾವರಣವೂ ಇದೆ. ಇದು ಕಾಂಗ್ರೆಸ್‌-ಜೆಡಿಎಸ್‌ ನಾಯಕರಲ್ಲಿ ತಳಮಳಕ್ಕೆ ಕಾರಣ. ಆದರೂ ನಮ್ಮ ಒಳ ಏಟಿಗೆ ಬಿಜೆಪಿ ತತ್ತರಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಬಳ್ಳಾರಿ ಕ್ಷೇತ್ರದ ಫ‌ಲಿತಾಂಶ ಸಚಿವ ಡಿ.ಕೆ.ಶಿವಕುಮಾರ್‌ ನಾಯಕತ್ವದ ಅಗ್ನಿಪರೀಕ್ಷೆ  ಎಂದೇ ಹೇಳಬಹುದು. ಇಡೀ ಚುನಾವಣಾ ಉಸ್ತುವಾರಿ ವಹಿಸಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಎಲ್ಲ ನಾಯಕರನ್ನು ಕ್ಷೇತ್ರಕ್ಕೆ ಕರೆಸಿ ಜಂಟಿ ಪ್ರಚಾರ ನಡೆಸಿ ಹದಿನೈದು ದಿನ ಬಳ್ಳಾರಿಯಲ್ಲೇ ಠಿಕಾಣಿ ಹೂಡಿ ತಂತ್ರಗಾರಿಕೆ ರೂಪಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಹೊರಗಿನವರು ಎಂಬ ವಾದಕ್ಕೆ ಬಲ ಬರದಂತೆ ನೋಡಿಕೊಳ್ಳುವಲ್ಲಿಯೂ ಯಶಸ್ವಿಯಾದರು. ಇದಕ್ಕೆ ತಕ್ಕಂತೆ ಶ್ರೀರಾಮುಲು ಸಹ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ಸಹೋದರಿಯನ್ನು ಗೆಲ್ಲಿಸಿಕೊಳ್ಳಲು ಸಾಕಷ್ಟು ಪಟ್ಟುಗಳನ್ನು ಹಾಕಿದ್ದರು. ರಾಜಕೀಯವಾಗಿ ತಮಗೆ ಚುನಾವಣೆ ಪ್ರಮುಖವಾಗಿದೆ ತಮ್ಮನ್ನು ಕೈ ಬಿಡಬೇಡಿ ಎಂದು ಸಮುದಾಯದ ಮುಖಂಡರ ಮೊರೆ ಸಹ ಹೋಗಿದ್ದರು. ಹೀಗಾಗಿ, ಅಲ್ಲಿನ ಫ‌ಲಿತಾಂಶವೂ ಕುತೂಹಲ ಮೂಡಿಸಿದೆ.

ಜಮಖಂಡಿ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ಬಿಜೆಪಿ ಕೈ ಹಿಡಿದಿದ್ದರೆ ಗೆಲುವು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ. ಆ ಕ್ಷೇತ್ರದ ಉಸ್ತುವಾರಿ ಸಿದ್ದರಾಮಯ್ಯ ಅವರು ವಹಿಸಿದ್ದರಿಂದ ಕಾಂಗ್ರೆಸ್‌ನಲ್ಲಿ ಗೆಲುವಿನ ಆಶಾಭಾವನೆಯಿದೆ.ಒಟ್ಟಾರೆ, ಐದು ಕ್ಷೇತ್ರಗಳಲ್ಲಿ ಐದೂ ಗೆಲ್ಲುವ ಮೂಲಕ ಸಮ್ಮಿಶ್ರ ಸರ್ಕಾರ ಗಟ್ಟಿಗೊಳಿಸುವ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಕಾ ಮಾಡಿಕೊಳ್ಳುವ ಕಾಂಗ್ರೆಸ್‌-ಜೆಡಿಎಸ್‌ ಉದ್ದೇಶ ಸಫ‌ಲವಾಗುತ್ತಾ? ಸಮ್ಮಿಶ್ರ ಸರ್ಕಾರಕ್ಕೆ ಸೆಮಿಫೈನಲ್‌ನಲ್ಲೇ ಟಕ್ಕರ್‌ ನೀಡಿ ಸರ್ಕಾರಕ್ಕೆ ಕಂಟಕ ತರುವ ಬಿಜೆಪಿ ಕಾರ್ಯತಂತ್ರ ಫ‌ಲಿಸುತ್ತಾ ಕಾದು ನೋಡಬೇಕಾಗಿದೆ.

ರಾಮನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯೇ ಕೊನೇ ಕ್ಷಣದಲ್ಲಿ ನಿವೃತ್ತಿಯಾದ ಹಿನ್ನೆಡೆಯಿಂದ ಕುದಿಯುತ್ತಿರುವ ಬಿಜೆಪಿ ರಾಮನಗರ, ಮಂಡ್ಯ ಹೊರತುಪಡಿಸಿ ಮೂರೂ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಶತಪ್ರಯತ್ನ ಹಾಕಿದೆ. ನಾಯಕರ ನಡುವಿನ ಆಂತರಿಕ ಅಸಮಾಧಾನದ ನಡುವೆಯೂ ಸ್ಥಳೀಯ ಮಟ್ಟದಲ್ಲಿ ಜಿದ್ದಾಜಿದ್ದಿಯಾಗಿ ಚುನಾವಣೆ ನಡೆದಿರುವುದರಿಂದ ಉತ್ತಮ ಫ‌ಲಿತಾಂಶದ ನಿರೀಕ್ಷೆಯಲ್ಲಿದೆ. ಒಂದೊಮ್ಮೆ ಫ‌ಲಿತಾಂಶ ವ್ಯತಿರಿಕ್ತವಾಗಿ ಬಂದರೆ “ತಲೆದಂಡ’ ಖಚಿತವಾಗಬಹುದು. ಹೀಗಾಗಿ, ಬಿಜೆಪಿ ನಾಯಕರು ಮೂರೂ ಕ್ಷೇತ್ರಗಳಲ್ಲಿನ ಮತದಾನದ ಆಂಕಿ-ಅಂಶ ಮುಂದಿಟ್ಟುಕೊಂಡು ಲೆಕ್ಕಚಾರದಲ್ಲಿ ನಿರತರಾಗಿದ್ದಾರೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next