ಬೆಳ್ತಂಗಡಿ: ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು.
ಹೆಲಿಪ್ಯಾಡ್‌ಗೆ ಬಂದಿಳಿದು ಕಾರಿನಲ್ಲಿ ಬಂದ ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರ ಸ್ವಾಮಿ ಅವರನ್ನು ದೇವಸ್ಥಾನದ ವತಿಯಿಂದ ವಾದ್ಯಘೋಷಗಳೊಂದಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.
ದೇವಾಲಯದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಎಚ್‌ಡಿಕೆ ದಂಪತಿ ಅಭಿಷೇಕವನ್ನು ಕಣ್ತುಂಬಿಸಿಕೊಂಡು, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಡಾ.ಡಿ.ವಿರೇಂದ್ರ ಹೆಗ್ಗಡೆ ಅವರಿಗೆ ಹಾರ ಹಾಕಿ, ಫಲ ಪುಷ್ಟ ನೀಡಿ ಗೌರವಿಸಿ ಕಾಲಿಗೆ ಎರಗಿ ಆಶೀರ್ವಾದ ಪಡೆದರು.
ಸುದ್ದಿಗೋಷ್ಠಿ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್‌ಡಿಕೆ ‘5 ವರ್ಷ ಸುಭದ್ರ ಸರ್ಕಾರ ನಡೆಸುವುದು ನಮ್ಮ ಆದ್ಯತೆ’ ಎಂದರು.
‘ಮಂತ್ರಿ ಮಂಡಲದದ ಗೊಂದಲ ಒಂದು ಕಟ್ಟು ಕಥೆ. ನಾನು ಕಾಂಗ್ರೆಸ್ ನಾಯಕರ ವಿಶ್ವಾಸ ಪಡೆದೇ ಕೆಲಸ ಮಾಡುತ್ತೇನೆ’ ಎಂದರು.
‘ಕರಾವಳಿಯ ಜನ ಸಹೋದರಂತೆ ಬಾಳಬೇಕು. ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ನನಗೆ ಕರಾವಳಿ ಜನರ ಸಹಕಾರ ಬೇಕು.ಕ್ಷುಲ್ಲಕ ವಿಚಾರಕ್ಕೆ ಅಮಾಯಕರು ಬಲಿಯಾಗಬಾರದು. ಏನೇ ಸಮಸ್ಯೆ ಬಂದರೂ ನನ್ನನ್ನು ಸಂಪರ್ಕಿಸಿ.ಕೋಮು ಪ್ರಚೋದನೆ ನೀಡುವವರ ಕುರಿತು ಎಚ್ಚರಿಕೆ ವಹಿಸಿ’ ಎಂದು ಮನವಿ ಮಾಡಿದರು.
‘ಎತ್ತಿನ ಹೊಳೆ ತಡೆಯುತ್ತೇನೆ ಎಂದು ನಾನು ಹೇಳಿಲ್ಲ. ಪ್ರಕೃತಿಯ ವಿನಾಶ ಮಾಡಲು ನಾನು ಬಿಡುವುದಿಲ್ಲ.ಯೋಜನೆಯಲ್ಲಿ ಅಕ್ರಮ ತಡೆಯಲು ಬದ್ಧನಾಗಿದ್ದೇನೆ’ ಎಂದರು.
‘ನನ್ನ ರೈತ ಉಳಿಯಬೇಕು.ಸಮ್ಮಿಶ್ರ ಸರ್ಕಾರ ವಿದ್ದರೂ ನಾನು ಪ್ರಣಾಳಿಕೆಯಲ್ಲಿ ಹೇಳಿದಂತಹ ಎಲ್ಲಾ ರೈತ ಪರ ಯೋಜನೆಗಳನ್ನು ವಿಶ್ವಾಸಮತ ಯಾಚನೆಯಾದ ಬಳಿಕ ಪ್ರಕಟ ಮಾಡುತ್ತೇನೆ’ ಎಂದರು.
ಶೃಂಗೇರಿ ಭೇಟಿ
ಎಚ್‌ಡಿಕೆ ಅವರು ಧರ್ಮಸ್ಥಳ ಭೇಟಿ ಬಳಿಕ ನೇರವಾಗಿ ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಯತ್ತ ತೆರಳುತ್ತಿದ್ದು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಜಗದ್ಗುರುಗಳ ಆಶೀರ್ವಾದ ಪಡೆಯುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ನಿ ಸಮೇತರಾಗಿ ಪುತ್ರನನ್ನು ಜೊತೆಗೂಡಲಿದ್ದಾರೆ.