Advertisement
ಕಲಾಪದಲ್ಲಿ ಚರ್ಚೆ ವೇಳೆ ಮಾತನಾಡಿದ ಅವರು, ಯಮಲೂರಿನಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆದಿದೆ. ಈಗಾಗಲೇ 80, 90 ಜನರ ಗಡಿಪಾರಿಗೆ ಆದೇಶ ನೀಡಿದ್ದೀರಿ. ರೈತರ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತೀರಿ ಎಂದರು. ನಾವು ಆ ಸಂದರ್ಭದಲ್ಲಿ ಬೆಂಕಿ ಹಚ್ಚಬಹುದಿತ್ತು. ಹಾಗಿದ್ದರೆ ಮಹದಾಯಿ ವಿಚಾರದ ಸಂದರ್ಭದಲ್ಲೇ ಹಾಗೆ ಮಾಡಬಹುದಿತ್ತು. ಆದರೆ ನಮಗೆ ರೈತರು ಹಾಗೂ ಜನಪರ ಕಾಳಜಿ ಇದೆ. ಅದಕ್ಕಾಗಿಯೇ ಸಹಕಾರ ನೀಡಿದ್ದೇವು ಎಂದು ಕುಮಾರಸ್ವಾಮಿ ಹೇಳಿದರು.
ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದಾಗ ಕಾಗೋಡು ತಿಮ್ಮಪ್ಪನವರು ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದರು. ಶ್ಯಾಮ್ ಭಟ್ ನೇಮಕಕ್ಕೆ ಸ್ಪೀಕರ್ ಆಗಿದ್ದಾಗ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸಚಿವರಾದ ಮೇಲೆ ಶ್ಯಾಮ್ ಭಟ್ ಅವರನ್ನು ನೇಮಕ ಮಾಡಿದರೂ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ರಮೇಶ್ ಕುಮಾರ್ ಅವರು ಕೂಡಾ ಅಧಿಕಾರ ಸಿಕ್ಕಿದರೆ ತಾಕತ್ತು ತೋರಿಸುವೆ ಎಂದಿದ್ದರು, ಆದರೆ ಸಚಿವರಾದ ಮೇಲೆ ರಮೇಶ್ ಕುಮಾರ್ ಅವರ ವೀರಾವೇಶ ಎಲ್ಲಿ ಹೋಯ್ತು ಅಂತ ಗೊತ್ತಾಗಿಲ್ಲ ಎಂದು ಕಾಲೆಳೆದರು.