Advertisement

Bidadi; ಪ್ರಾಮಾಣಿಕ ಎಂದು ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ; ಡಿಕೆಶಿಗೆ ಎಚ್‌ ಡಿಕೆ ಸವಾಲು

04:50 PM Aug 04, 2024 | Team Udayavani |

ರಾಮನಗರ (ಬಿಡದಿ): ನಿಮ್ಮದೆಲ್ಲ ಬಿಚ್ಚಿಡುತ್ತೇನೆ ಎಂದು ಹೇಳಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಗುಡುಗಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ನಾನು ನಿಮ್ಮದನ್ನು ಬಿಚ್ಚಲು ಹೋದರೆ ಪುಟಗಟ್ಟಲೆ ಇದೆ ಎಂದು ಎಚ್ಚರಿಕೆ ಕೊಟ್ಟರು.

Advertisement

ಬಿಡದಿಯಲ್ಲಿ ಮೈಸೂರು ಚಲೋ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ಕೊಟ್ಟ ನಂತರ ಬಹಿರಂಗ ಸಭೆಯಲ್ಲಿ ಭಾಷಣ ಮಾಡಿದರು.

ಆ ಹೆಣ್ಣುಮಗಳನ್ನು ಕಿಡ್ನಾಪ್ ಮಾಡಿ ಬೆದರಿಸಿ ಅವರಪ್ಪನಿಂದ ಸದಾಶಿವನಗರದಲ್ಲಿ ನಿವೇಶನ ಬರೆಸಿಕೊಂಡಿದ್ದೀರಿ. ಆ ಹೆಣ್ಣುಮಗಳನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದ್ದು ನೀವೇ ಅಲ್ಲವೇ. ಅದೇನೋ ಬಿಚ್ಚುತ್ತೇನೆ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ, ನಂದು ವಿಜಯೆಂದ್ರದ್ದು. ಆಮೇಲೆ ನಿನ್ನದನ್ನು ಹೇಗೆ ಬಿಚ್ಚುತೀನಿ ಎಂದು ನೋಡುವಿಯಂತೆ. ಏನಿದೆ ನಿಮ್ಮ ಬಳಿ ಬಿಚ್ಚಿ, ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ ಎಂದು ಡಿಕೆಶಿ ವಿರುದ್ಧ ಎಚ್ಡಿಕೆ ವಾಗ್ದಾಳಿ ನಡೆಸಿದರು.

ನಾನು ಬಿಚ್ಚುವುದಕ್ಕೆ ಹೋದರೆ ನಿಮ್ಮದು ಪುಟಗಟ್ಟಲೆ ಇದೆ. ಅಜ್ಜಯ್ಯನ ಬಗ್ಗೆ ಈ ಡಿ.ಕೆ.ಶಿವಕುಮಾರ್ ಗೆ ಭಕ್ತಿ ಗೌರವ ಇದ್ದರೆ ಪ್ರಮಾಣ ಮಾಡಲಿ. ಅಜ್ಜಯ್ಯನ ಬಗ್ಗೆ ನನಗೆ ಗೌರವ, ಭಕ್ತಿ ಎರಡೂ ಇದೆ. ನಾನು ಪ್ರಾಮಾಣಿಕವಾಗಿ ಬೆಳೆದು ಬಂದಿದೇನೆ ಎಂದು ಅವರ ಮೇಲೆ ಪ್ರಮಾಣ ಮಾಡಿ. ನಾನೂ ಪ್ರಮಾಣ ಮಾಡುತ್ತೇನೆ ಎಂದು ಡಿಸಿಎಂ ಡಿಕೆಶಿಗೆ ನೇರ ಸವಾಲು ಹಾಕಿದರು.

Advertisement

ಈ ಡಿಕೆಶಿಗೆ ಅಜ್ಜಯ್ಯನ ಶಾಪವೂ ಆರಂಭವಾಗಿದೆ. ಎಷ್ಟು ಮನೆಗಳನ್ನು ಒಡೆದು ನೀವು ಬೆಳೆದಿದ್ದೀರಿ ಎಂದು ನನಗೆ ಗೊತ್ತಿದೆ. ನಾನು ಏನೂ ಮಾಡಿಯೇ ಇಲ್ಲ, ಸ್ವಚ್ಚವಾಗಿದ್ದೇನೆ ಎಂದು ಅಜ್ಜಯನ ಮುಂದೆ ನಿಂತು ಪ್ರಮಾಣ ಮಾಡಲಿ ಎಂದು ಸವಾಲೆಸೆದರು.

ನಾನು ಯಾರಿಗೂ ದ್ರೋಹ ಮಾಡಲಿಲ್ಲ. ಮಾಡುವುದೂ ಇಲ್ಲ. ಜನರ ಆಶೀರ್ವಾದವೇ ನನ್ನ ಬಲ, ಅದೇ ನನ್ನ ಬೆಳೆಸಿದೆ. ನಾನು ಯಡಿಯೂರಪ್ಪ ಅವರಿಗೂ ದ್ರೋಹ ಮಾಡಲಿಲ್ಲ. ಆ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಅಧಿಕಾರ ಹಂಚಿಕೆ ಆಗಲಿಲ್ಲ. ನಾನು ಯಡಿಯೂರಪ್ಪ ಅವರಿಗೆ ಯಾವತ್ತೂ ದ್ರೋಹ ಮಾಡಿಲ್ಲ. ಬಿಜೆಪಿ‌-ಜೆಡಿಎಸ್ ಮೈತ್ರಿ ಕಾಂಗ್ರೆಸ್ ನಿದ್ದೆಗೆಡಿಸಿದೆ. ಅದಕೆ ಶಿವಕುಮಾರ್ ನಮ್ಮ ಮೈತ್ರಿ ಬಗ್ಗೆ ಹೊಟ್ಟೆ ಉರಿ ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಮತ್ತೆ ಅಧಿಕಾರಕ್ಕೆ ಬರುವ ಆಸೆ ಇಲ್ಲ. ಈಗಾಗಲೇ ನಾನು ಎರಡು ಸಲ ಸಿಎಂ ಆಗಿದ್ದೇನೆ. ಆದರೆ ರಾಜ್ಯಕ್ಕೆ ಒಳ್ಳೆಯದಾಗಬೇಕು. ನಾನು ಅಧಿಕಾರ ಕೇಳಿ ನಿಮ್ಮ ಬಳಿ ಬಂದಿರಲಿಲ್ಲ. ನೀವೇ ಗೋಗರೆದು ಸಿಎಂ ಮಾಡಿದಿರಿ ಶಿವಕುಮಾರ್. ನೀವು ಮರೆತು ಹೋಗಿದ್ದೀರಿ, ಒಮ್ಮೆ ನೆನಪುವಾಡಿಕೊಳ್ಳಿ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ಟಾಂಗ್ ಕೊಟ್ಟರು.

ಡಾ.ಮಂಜುನಾಥ್ ಅವರು ಡಾಕ್ಟರ್ ಕೆಲಸ ಮಾತ್ರ ಮಾಡ್ತಿಲ್ಲ. ಅವರಲ್ಲೂ ರಾಜಕೀಯದ ರಕ್ತ ಹರಿಯುತ್ತಿದೆ. ಅವರ ಬಗ್ಗೆಯೂ ಶಿವಕುಮಾರ್ ಮಾತಾಡಿದ್ದಾರೆ. ಅವರ ಹತಾಶೆ, ನಿರಾಶೆ ನನಗೆ ಅರ್ಥವಾಗುತ್ತದೆ ಎಂದು ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು.

ಗೃಹ ಸಚಿವರಾಗಿ ಒಬ್ಬ ದಲಿತ ಪೊಲೀಸ್ ಅಧಿಕಾರಿ ರಕ್ಷಣೆ ಮಾಡಲು ಪರಮೇಶ್ವರ್ ಅವರಿಂದ ಆಗಲಿಲ್ಲ. ಅಲ್ಲಿಗೆ ಅವರು ಇಪ್ಪತ್ತು ಲಕ್ಷ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡಿದ್ದಾರೆ. ಈಗ ಅವರು ಅಲ್ಲೇ ಉಳಿಯಲು ಮೂವತ್ತು ಲಕ್ಷ ಕೊಡಬೇಕಂತೆ. ಒಬ್ಬ ಪೋಲಿಸ್ ಅಧಿಕಾರಿಯನ್ನೇ ರಕ್ಷಣೆ ಮಾಡಲಾಗದ ಈ ಸರ್ಕಾರಕ್ಕೆ ಜನರ ರಕ್ಷಣೆ ಮಾಡಲು ಸಾಧ್ಯವೇ ಎಂದು ಕೇಂದ್ರ ಸಚಿವರು ಪ್ರಶ್ನೆ ಮಾಡಿದರು.

ರಾಜಕೀಯ ನಿವೃತ್ತಿಯ ಸವಾಲು ಹಾಕಿದ ಎಚ್‌ ಡಿಕೆ

ದಲಿತರಿಗೆ ಸೇರಬೇಕಾದ 68 ಎಕರೆ ಜಮೀನು ಡಿಸಿಎಂ ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನು ಡಿಕೆ ಶಿವಕುಮಾರ್ ಹೊಡೆದು ಕೊಂಡಿದ್ದಾರೆ. ಅಸಲಿ ಸೊಸೈಟಿಯನ್ನು ನಕಲಿ ಮಾಡಿ ದಲಿತರ ಭೂಮಿ ಲಪಟಾಯಿಸಿದ್ದಾರೆ. ಇವರ ಬಳಿ ‌ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದರು.

ನಾನು ಸಿನಿಮಾ ವಿತರಕನಾಗಿದ್ದಾಗ ಭೂಮಿ‌ ಖರೀದಿಸಿದೆ. ಕೇತಗಾನಹಳ್ಳಿಯಲ್ಲಿ ನಾನು ಚಲನಚಿತ್ರ ಪ್ರದರ್ಶಕನಾಗಿದ್ದಾಗ ಚುನಾವಣೆಗೆ ನಿಲ್ಲುವ 15 ವರ್ಷಗಳ ಹಿಂದೆ 45 ಎಕರೆ ಜಮೀನು ತಗೊಂಡಿದ್ದೇನೆ. ಇದನ್ನು ನಾನು ಎಲ್ಲೂ ಮುಚ್ಚಿಟ್ಟಿಲ್ಲ. ಯಾರಿಗೂ ಮೋಸ ಮಾಡಲಿಲ್ಲ ನಾನು. ನಾನು ವಂಚನೆ ಮಾಡಿ ಭೂಮಿ ಖರೀದಿಸಿದ್ದಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ಸರ್ಕಾರದ ಬಗ್ಗೆ ನಮಗೆ ಅಸೂಯೆ ಇಲ್ಲ

ಈ ಪಾದಯಾತ್ರೆ ಅಸೂಯೆಯಿಂದ ಹಮ್ಮಿಕೊಂಡಿದ್ದಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಅಂಗಡಿ ಬಾಗಿಲು ತೆರೆದು ಕೂತಿದೆ. ಗ್ಯಾರಂಟಿಗಳಿಂದ ಬದಲಾವಣೆಗಳನ್ನು ತಂದಿದ್ದೇವೆ ಅನ್ಕೊಂಡಿದ್ದೇವೆ. ಗ್ಯಾರಂಟಿಗಳಿಂದ ರಾಜ್ಯವನ್ನು ದರಿದ್ರದತ್ತ ತಗೊಂಡು ಹೋಗಿದ್ದಾರೆ. ಮಂತ್ರಿಗಳಲ್ಲಿ ಭ್ರಷ್ಟಾಚಾರ ನಡೆಸಲು ಪೈಪೋಟಿ ನಡೀತಿದೆ ಎಂದು  ಕುಮಾರಸ್ವಾಮಿ ಆರೋಪಿಸಿದರು.

ಬಿಜೆಪಿ ಸರ್ಕಾರದಲ್ಲಿ ಅಕ್ರಮ ನಡೆದಿತ್ತು ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಒಂದೇ ಒಂದು ದಾಖಲೆ ಕೊಡಲು ಆಗಿಲ್ಲ ಎಂದು ಟಾಂಗ್ ಕೊಟ್ಟರು.

ಮೂಡಾ ಬಗ್ಗೆ ದಾಖಲೆ ಸಮೇತ ಮಾತನಾಡಿದ್ದೇವೆ

ಮೂಡಾ ಬಗ್ಗೆ ನಾನು, ನಮ್ಮ ಶಾಸಕರು ಇವರ ಅಕ್ರಮದ ಬಗ್ಗೆ ದಾಖಲೆಗಳ ಸಮೇತ ಮಾತನಾಡಿದೇವೆ. ಮೈಸೂರು ನಗರದ ಉಸ್ತುವಾರಿಯನ್ನು ಸಿಎಂ ಅವರೇ ವಹಿಸಿಕೊಂಡಿದ್ದಾರೆ. ಸಿಎಂ ತಮ್ಮ ಪತ್ನಿ ಹೆಸರಲ್ಲಿ 15 ಸೈಟು ಪಡೆಯಲು ನಮ್ಮ ವಿರೋಧ ಇಲ್ಲ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಸೈಟು ಪಡೆದಿದ್ದಾರೆ. ಇಲ್ಲಿ ನಿಂಗ, ಜವರ, ದೇವರಾಜ, ದಲಿತ ಅನ್ನೋ ಪ್ರಶ್ನೆ ಇಲ್ಲ. ನಕಲಿ ದಾಖಲೆ ಸೃಷ್ಟಿ 15 ಸೈಟುಗಳನ್ನು ತಗೊಂಡಿದ್ದಾರೆ. ಇದನ್ನು ಸಿಎಂ ಕಾನೂನು ಬಾಹಿರವಾಗಿ ತಗೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ದೂರಿದರು.

ಡಿಕೆಶಿ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ; ಏಕವಚನ ನನಗೂ ಬರುತ್ತದೆ

ಡಿಸಿಎಂ ಡಿಕೆ ಶಿವಕುಮಾರ್ ಅವರು ಏ‌ನು ಪ್ರಶ್ನೆಗಳನ್ನು ಹಾಕಿದಾರೋ ಅದಕ್ಕೆ ಉತ್ತರ ಕೊಡಲು ಇಲ್ಲಿದ್ದೇನೆ. ನನ್ನ ಬಗ್ಗೆ, ವಿಜಯೇಂದ್ರ ಬಗ್ಗೆ ಡಿಸಿಎಂ ಏಕವಚನದಲ್ಲಿ ಮಾತಾಡಿದ್ದಾರೆ. ನಾವೂ ಹಳ್ಳಿಯ ಮಕ್ಕಳೇ ನಿಮಗಿಂತಲೂ ಏಕವಚನದಲ್ಲಿ ಮಾತಾಡಲು ನಮಗೂ ಗೊತ್ತು. ಆದರೆ ಆ ಕೆಳಮಟ್ಟಕ್ಕೆ ನಾವು ಇಳಿಯಲ್ಲ ಎಂದು ಎಚ್ಚರಿಕೆ ಕೊಟ್ಟರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ’ ಮಾಜಿ ಸಚಿವರಾದ ಬಿ.ಶ್ರೀರಾಮುಲು, ಸಿ.ಸಿ.ಪಾಟೀಲ್, ಎ.ಮಂಜು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಸಂಸದರಾದ ಡಾ.ಡಾ.ಸಿ.ಎನ್.ಮಂಜುನಾಥ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಕೃಷ್ಣಪ್ಪ,  ಹರೀಶ್ ಗೌಡ, ಮಾಜಿ ಶಾಸಕ ಮಂಜುನಾಥ್

ಸೇರಿದಂತೆ ಎರಡೂ ಪಕ್ಷಗಳ ಶಾಸಕರು, ಸಂಸದರು, ನಾಯಕರು, ಅಸಂಖ್ಯಾತ ಕಾರ್ಯಕರ್ತರು ನಮ್ಮ ಜತೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next