ರಾಮನಗರ: ರಾಮನಗರ ಉಪವಿಭಾಗಾಧಿಕಾರಿಯವರು (ಎಸಿ) ಇಲ್ಲೇ ಮುಂದುವರೆಯಲು ತಮಗೆ 3 ಕೋಟಿ ರೂ ಆಫರ್ ಕೊಟ್ಟಿದ್ದರು ಎಂದು ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿ.ಎಂ.ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಗೆದ್ದು ಬಂದಿರುವ ಪಕ್ಷದ ಬೆಂಬಲಿತರಿಗೆ ನಗರದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲು ನಗರಕ್ಕೆ ಭೇಟಿ ಕೊಟ್ಟಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಭ್ರಷ್ಟಾಚಾರದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ವಿರೋಧ ಪಕ್ಷಗಳ ನಾಯಕರು ಸವಾಲು ಎಸೆದಿದ್ದಾರೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಅವರು ಹೀಗೆ ಪ್ರತಿಕ್ರಿಯಿಸಿದರು. ಎಸಿಯವರನ್ನು ತಾವು ಇಲ್ಲಿಂದ ಎತ್ತಂಗಡಿ ಮಾಡಿಸಲು ತಾವು ನಡೆಸಿದ ಪ್ರಯತ್ನದ ವೇಳೆ ಈ ಪಕ್ರರಣ ನಡೆದಿದೆ ಎಂದರು. ನಂತರ ಅವರು (ಎಸಿ) ಸಿಎಂ ಕಚೇರಿಯಿಂದ ಹಿಡಿದು ಯಾರ್ಯಾರಿಗೆ ಎಷ್ಟೆಷ್ಟು ಪೇಮೆಂಟ್ ಕೊಟ್ಟಿದ್ದಾರೆ ಎಂಬುದೆಲ್ಲ ತಮಗೆ ಗೊತ್ತು ಎಂದರು.
ಭ್ರಷ್ಟಾಚಾರದ ದಾಖಲೆ ಇಷ್ಟು ಕೊಂಡು ಸಮಯ ವ್ಯರ್ಥ ಮಾಡಲು ತಮಗೆ ಬೇರೆ ಇನ್ನು ಮುಖ್ಯವಾದ ಸಾಕಷ್ಟು ಕೆಲಸಗಳಿವೆ. ಊರೂರಲ್ಲಿ ಜನ ಭ್ರಷ್ಟಾಚಾರದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರ ಬಳಿ ಲೆಟರ್ ಹೆಡ್ ಇರೋದೇ ಇಂತಹ ಆಕ್ಷನ್‌ಗೆ ಅಂತಿದ್ದಾರೆ ಜನ ಎಂದರು. ಎಸ್‌ಐ, ಸಿಪಿಐ ವರ್ಗಾವಣೆಗೂ ಏನೇನಾಗಿದೆ ಅಂತ ಗೊತ್ತು ಎಂದರು.
ಇಲ್ಲಿ ಪೋಸ್ಟಿಂಗೆ (ಅಧಿಕಾರಿಗಳ ವರ್ಗಾವಣೆ) ನಡಿಯುತ್ತಿರುವುದು ತಮಗೆ ಕಾಣದ್ದೇನಲ್ಲ. ಅಧಿಕಾರಿಗಳು ಎಲ್ಲಿಗೆ ಪೋಸ್ಟ್ ಮಾಡಿದರು ಕೆಲಸ ಮಾಡಲೇಬೇಕು. ಹೀಗಾಗಿ ಹಣ ಕೊಟ್ಟು ಸ್ಥಾನ ಪಡೆದು ನಂತರ ಜನರ ಜೇಬಿಗೆ ಕೈ ಹಾಕಬೇಡಿ ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.