ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ ಮಹಾದ್ವಾರಕ್ಕೆ ಉರಿಗೌಡ-ನಂಜೇಗೌಡ ಹೆಸರು ಇಟ್ಟಿದ್ದಕ್ಕೆ ಬಿಜೆಪಿ ವಿರುದ್ಧ ಕೆಂಡಕಾರಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ಒಕ್ಕಲಿಗರನ್ನು ಅಪಹಾಸ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿ ಕುಮಾರಸ್ವಾಮಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಪೋಲ ಕಲ್ಪಿತ ಪಾತ್ರಗಳನ್ನು ಸೃಷ್ಟಿಸಿ, ಕೋಮು ದ್ವೇಷ ಹರಡಿ, ಜನರ ತಲೆಯಲ್ಲಿ ವಿಷ ಬೀಜ ಬಿತ್ತಿ ಹೆಮ್ಮರವಾಗಿ ಬೆಳೆಯಲು ತನು-ಮನ-ಧನವನ್ನೆಲ್ಲ ಅರ್ಪಿಸುವ ಪಕ್ಷ ಬಿಜೆಪಿ. ಟಿಪ್ಪು ಸುಲ್ತಾನನನ್ನು ಕೊಂದವರು ಎನ್ನಲಾಗುವ ಕಾಲ್ಪನಿಕ ಪಾತ್ರಗಳಾದ ಉರಿಗೌಡ, ನಂಜೇಗೌಡ ಎಂಬ ಹೆಸರನ್ನು ಪ್ರಧಾನಿ ರೋಡ್ ಶೋ ನಡೆಸಿದ ಮಹಾದ್ವಾರಕ್ಕೆ ಇಟ್ಟಿದ್ದು ಏಕೆ?
ಮೇಲಾಗಿ ಮಹಾದ್ವಾರಕ್ಕೆ ಇದ್ದ ಒಕ್ಕಲಿಗರ ಪರಮಪೂಜ್ಯ ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರನ್ನು ಮುಚ್ಚಿ, ಅವರ ಜಾಗದಲ್ಲಿ ಈ ಕಾಲ್ಪನಿಕ ಪಾತ್ರಗಳ ಹೆಸರನ್ನು ಹಾಕಿದ್ದ ಉದ್ದೇಶವೇನು? ಇಂತಹ ಚಿಲ್ಲರೆ, ದ್ವೇಷ ತುಂಬಿದ ನಡೆಯಿಂದ ಒಕ್ಕಲಿಗರ ಮನ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದರೆ ಅದು ಶತಮೂರ್ಖತನ.
ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿದ ಸಿ.ಟಿ ರವಿಯವರೇ ಉರಿಗೌಡ, ನಂಜೇಗೌಡನ ಹೆಸರಲ್ಲಿ ಶಾಶ್ವತ ದ್ವಾರ ನಿರ್ಮಿಸುತ್ತೀರಾ? ನಾಚಿಕೆಯಾಗಬೇಕು ನಿಮಗೆ. ಕೊಳಕು ಮಟ್ಟದ ರಾಜಕಾರಣವನ್ನೇ ಉಸಿರಾಗಿಸಿ
ಕೊಂಡಿರುವ ನಿಮಗೆ ಪ್ರಧಾನಿಯವರ ಗುಲಾಮಗಿರಿ ಮಾಡುವ ಅನಿವಾರ್ಯತೆ ಇದೆ. ಒಕ್ಕಲಿಗರು ಸ್ವಾಭಿಮಾನಕ್ಕೆ ಹೆಸರಾದವರು ಎಂದು ಟ್ವೀಟ್‌ನಲ್ಲಿ ವಿವರಿಸಿದ್ದಾರೆ.