ಮೈಸೂರು: ನಾಯಕ ಸಮಾಜದ ಪ್ರಭಾವಿ ಮುಖಂಡ, 2 ಬಾರಿ ಎಂಎಲ್‌ಎ, ಒಂದು ಬಾರಿ ಎಂಎಲ್‌ಸಿ ಆಗಿದ್ದ ಎಚ್.ಡಿ.ಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಚಿಕ್ಕಮಾದು (66) ನಿಧನರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ನಗರದ ಅರವಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ
ಕೊನೆಯುಸಿರೆಳೆದಿದ್ದಾರೆ.
ಬುಧವಾರ ಬೆಳಗ್ಗೆ ವಿಜಯನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ನಂತರ ತೆರೆದ ವಾಹನದಲ್ಲಿ ಎಚ್.ಡಿ.ಕೋಟೆಗೆ ಕೊಂಡೊಯ್ದು, ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ, ಮಾಜಿ ಸಂಸದ ಎಚ್.ವಿಶ್ವನಾಥ್, ಮಾಜಿ ಶಾಸಕರಾದ ಚಿಕ್ಕಣ್ಣ, ಜಿ.ಟಿ.ದೇವೇಗೌಡ, ಎಂಎಲ್‌ಸಿ ಧರ್ಮ ಸೇನ ಇತರರು ಅಂತಿಮ ದರ್ಶನ ಪಡೆದರು. ಕೆ.ಆರ್.ನಗರ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಂತಿಮ ದರ್ಶನ ಪಡೆದರು. ಹುಣಸೂರು ತಾಲೂ ಕಿನ ಹೊಸ ರಾಮೇನಹಳ್ಳಿಯಲ್ಲಿ ರುವ ಚಿಕ್ಕಮಾದು ಅವರಿಗೆ ಸೇರಿದ ವಾಲ್ಮೀಕಿ ಟ್ರಸ್ಟ್‌ನ ಶಾಲೆ ಆವರಣ ದಲ್ಲಿ ಸಂಜೆ 6.30ರ ಸುಮಾರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರು ಪತ್ನಿಯರಾದ ಜಯಮ್ಮ ಮತ್ತು ನಾಗಮ್ಮ, ಪುತ್ರರಾದ ಜಿಪಂ ಸದಸ್ಯ ಅನಿಲ್ ಚಿಕ್ಕ ಮಾದು, ಸುನಿಲ್, ಪುತ್ರಿಯರಾದ ಮಮತಾ, ರಂಜಿತಾ ಸೇರಿ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
2 ವರ್ಷಗಳ ಹಿಂದೆ ಅಮೆರಿಕದಲ್ಲಿ ಯಕೃತ್ ಕಸಿ ಮಾಡಿಸಿಕೊಂಡಿದ್ದ ಅವರಿಗೆ ನಿಯಮಿತ ವಿಶ್ರಾಂತಿ ಪಡೆಯದ ಕಾರಣ ಸೋಂಕು ತಗುಲಿತ್ತು. ಇದರಿಂದಾಗಿ ಮೂತ್ರಪಿಂಡದಲ್ಲೂ ಸಮಸ್ಯೆ ಸೇರಿ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರು. ಹೀಗಾಗಿ 15 ದಿನಗಳ ಹಿಂದೆ ನಗರದ ಸಿಗ್ಮಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇತ್ತೀಚೆಗೆ ನಡೆದ ವಿಧಾನಸೌಧದ ವಜ್ರಮಹೋತ್ಸವಕ್ಕೆ ಆಂಬ್ಯುಲೆನ್ಸ್‌ನಲ್ಲೇ ಹೋಗಿಬಂದಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಬಳಲಿದ್ದ ಚಿಕ್ಕಮಾದು ಅವರನ್ನು ನಗರದ ಅರವಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅರಸರಿಂದ ಪ್ರೇರಣೆ: ಕೆ.ಆರ್.ನಗರ ತಾಲೂಕು ಹೊಸೂರು ಕಲ್ಲಹಳ್ಳಿಯಲ್ಲಿ ಸಿದ್ದನಾಯಕ ಅವರ ಪುತ್ರರಾಗಿ 1951ರ ಮಾರ್ಚ್ 7 ರಂದು ಜನಿಸಿದ ಚಿಕ್ಕಮಾದು ಅವರ ಕುಟುಂಬ ನಂತರದ ದಿನಗಳಲ್ಲಿ ಹುಣಸೂರು ತಾಲೂಕಿನ ಹೊಸ ರಾಮೇನ ಹಳ್ಳಿಯಲ್ಲಿ ನೆಲೆಸಿತ್ತು. ಚಿಕ್ಕಮಾದು ಬಿಳಿಕೆರೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಮೈಸೂರು ವಿವಿಯಿಂದ ಪದವಿ ಪಡೆದರು. ವಿಧಾನಪರಿಷತ್ ಸದಸ್ಯರಾದ ನಂತರ ಮೈಸೂರಿನ ವಿಜಯನಗರಕ್ಕೆ ವಾಸ್ತವ್ಯ ಬದಲಿಸಿದ್ದರು. ಡಿ.ದೇವರಾಜ ಅರಸು ಅವರಿಂದ ಪ್ರೇರಿತರಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು, 1983 ರಲ್ಲೇ ಹುಣಸೂರು ಮತ್ತು ಮೈಸೂರಿನ ನರಸಿಂಹ ರಾಜ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಾಜ ಕೀಯ ಪ್ರವೇಶಿಸಿದ್ದರು. 1991ರಲ್ಲಿ ಚಂದ್ರ ಪ್ರಭಾ ಅರಸು ಅವರ ರಾಜೀನಾಮೆಯಿಂದ ತೆರ ವಾಗಿದ್ದ ಹುಣ ಸೂರು ವಿಧಾನಸಭಾ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ದ್ದರು. ಹುಣಸೂರು ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿಯೂ ದುಡಿದಿದ್ದ ಅವರು, 2005ರಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು. ಚಿಕ್ಕಮಾದು ಅವರನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ವಿಧಾನಪರಿಷತ್ ಸದಸ್ಯರಾಗಿ ನೇಮಕ ಮಾಡಿದ್ದರು.
2013ರ ಚುನಾವಣೆಯಲ್ಲಿ ಪಕ್ಷದ ಅಣತಿಯಂತೆ ಎಚ್.ಡಿ.ಕೋಟೆಗೆ ಕ್ಷೇತ್ರ ಬದಲಿಸಿದರೆ, ಮತ್ತೆ ಜೆಡಿಎಸ್‌ಗೆ ಬಂದ ಜಿ.ಟಿ.ದೇವೇಗೌಡ ಅವರು ಹುಣಸೂರು ಕ್ಷೇತ್ರದ ಬದಲಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ತೆರವಾಗಿದ್ದ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾಗುವ ಮೂಲಕ ಹಿಂದೆ ಹುಣಸೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜಿ.ಟಿ. ದೇವೇಗೌಡ ಹಾಗೂ ಎಸ್.ಚಿಕ್ಕಮಾದು ಇಬ್ಬರೂ ಶಾಸಕರಾಗಲು ಸಾಧ್ಯವಾ ಯಿತು. ಎಚ್.ಡಿ.ಕೋಟೆ ಕ್ಷೇತ್ರಕ್ಕೆ ಹೊಸದಾಗಿ ಕಾಲಿಟ್ಟರೂ ಸ್ಥಳೀಯರಾದ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಬೀಚನಹಳ್ಳಿ ಚಿಕ್ಕಣ್ಣ ವಿರುದಟಛಿ 12 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ಜೆಡಿಎಸ್‌ನ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ನೀತಿ ನಿರೂಪಣಾ ಸಮಿತಿಯಾದ ಕೋರ್ ಕಮಿಟಿ ಸದಸ್ಯರಾಗಿದ್ದರು.