ಹಾಸನ: ಬಿಜೆಪಿಯವರು ದೇಶದ ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಬಿಜೆಪಿಗೆ ರಾಜಕೀಯವಾಗಿ ತಕ್ಕ ಉತ್ತರ ನೀಡಬೇಕಾದರೆ ಕಾಂಗ್ರೆಸ್ ಸೇರಿ ಜಾತ್ಯತೀತ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಗ್ಗಟ್ಟಾಗಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕರೆ ನೀಡಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಸಿಎಎ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಪೌರತ್ವ ಕಾಯ್ದೆ ತಿದ್ದುಪಡಿ ಮಾಡುವ ಅಗತ್ಯವಾದರೂ ಕೇಂದ್ರ ಸರ್ಕಾರಕ್ಕೆ ಏನಿತ್ತು ಎಂದು ಪ್ರಶ್ನಿಸಿದರು. ಪೌರತ್ವವನ್ನು ಸಾಬೀತುಪಡಿಸಲ ಪ್ರತಿಯೊಬ್ಬರೂ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಷ್ಟ. ಕೋಮುವಾದಿ ಶಕ್ತಿಗಳನ್ನು ಬಗ್ಗು ಬಡಿಯದಿದ್ದರೆ ಸಿಎಎ ನಂತಹ ಹಲವು ಕಾನೂನುಗಳು ಬರಬಹುದು. ಗಾಂಧೀಜಿಯವರನ್ನು ಕೊಂದವರ ಹಿನ್ನೆಲೆಯನ್ನು ವಿಶ್ಲೇಷಿಸುವುದಿಲ್ಲ. ಮಹಾತ್ಮಗಾಂಧಿ ಕೊಂದವರಿಗೂ ಭಾರತರತ್ನ ಕೊಡಬೇಕೆಂಬ ಚರ್ಚೆ ನಡೆಯುತ್ತಿದೆ. ಇದು ಈ ದೇಶದ ದುರಂತ ಎಂದರು.
ಪ್ರತಿಭಟನೆಗಳು, ಭಾಷಣದಿಂದ ಏನೂ ಪ್ರಯೋಜನವಿಲ್ಲ. ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಎದುರಿಸುವ ರಾಜಕೀಯ ಶಕ್ತಿಯನ್ನು ಗಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಜಾತ್ಯತೀತ ಶಕ್ತಿಗಳು, ಪ್ರಾದೇಶಿಕ ಪಕ್ಷಗಳು ಬಿಜೆಪಿ ವಿರುದ್ಧ ಸಂಘಟಿತವಾಗಿ ಹೋರಾಟ ಮಾಡಬೇಕು. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾತ್ಯತೀತ ಮತ್ತು ಪ್ರಾದೇಶಿಕ ಪಕ್ಷಗಳು ಒಗ್ಗೂಡುವ ಪ್ರಯತ್ನ ನಡೆಯಿತು. ಹಾಗೆಯೇ, 2019ರ ಚುನಾವಣೆಯಲ್ಲೂ ಅಂತಹ ಪ್ರಯತ್ನ ನಡೆಯಿತಾದರೂ ಯಶಸ್ವಿಯಾಗಲಿಲ್ಲ ಎಂದು ವಿಷಾದಿಸಿದರು.
ಬಾಬರಿ ಮಸೀದಿ -ರಾಮಜನ್ಮಭೂಮಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದಾಗಲೂ ದೇಶದ ಜನರು ಸೌಹಾರ್ದತೆ, ಸಾಮರಸ್ಯ ಸ್ಥಾಪನೆಯಾಗಲಿ ಎಂದು ಸುಮ್ಮನಾದರು. ಈಗ ಸಿಎಎ, ಎನ್‌ಆರ್‌ಸಿ ಜಾರಿಗೆ ಕೇಂದ್ರ ಸರ್ಕಾರ ಮುಂದಾದಾಗ ಜನರು ಅನಿವಾರ್ಯವಾಗಿ ಸಿಡಿದೆದ್ದಿದ್ದಾರೆ. ನಾವು ಭಾರತೀಯರು ಎಂದು ಸಾಬೀತುಪಡಿಸಲು ಯಾವುದೇ ಕಾಯ್ದೆಯ ಅಗತ್ಯವಿಲ್ಲ ಎಂದು ಜನರು ಈಗ ಬೀದಿಗಿಳಿದಿದ್ದಾರೆ.
– ಯು.ಟಿ.ಖಾದರ್, ಮಾಜಿ ಸಚಿವ.