ಕುಣಿಗಲ್: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಅವರಿಗೆ ಮತಹಾಕುವ ಮೂಲಕ 2018ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ನಾವೇ ಸೋಲಿಸಿದ್ದು ಎಂದು ಗರ್ವದಿಂದ ಮೆರೆಯುತ್ತಿರುವ ನಾಯಕರಿಗೆ ಗರ್ವಭಂಗ ಮಾಡಬೇಕೆಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಕೈಮುಗಿದು ಮನವಿ ಮಾಡಿದರು.
ಕುಣಿಗಲ್ ತಾಲೂಕಿನ ಗವಿಮಠದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಪರ ಮತಯಾಚಿಸಿ ಮಾತನಾಡಿದರು.
ಸಾಮಾನ್ಯ ರೈತನ ಮಗನಾಗಿ ಹುಟ್ಟಿ ಈ ದೇಶದ ಪ್ರಧಾನಿಯಾಗುವಂತ ಶಕ್ತಿ ನೀಡಿದ ರಾಜ್ಯದ ಜನತೆಗೆ ನಾನು ಎಂದಿಗೂ ಅನ್ಯಾಯ ಮಾಡಿಲ್ಲ. ಎಲ್ಲಾ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಸಿಗುವಂತೆ ಕೆಲಸ ಮಾಡಿಕೊಂಡು ಜೆಡಿಎಸ್ ಪಕ್ಷ ಬೆಳದು ಬಂದಿದೆ. ಆದರೆ ನಮ್ಮ ಜೊತೆಯಲ್ಲಿ ಇದ್ದು ನಮ್ಮ ಪಕ್ಷದಿಂದ ಅಧಿಕಾರದ ಗದ್ದೆಗೆ ಏರಿ ಎಲ್ಲವನ್ನು ಅನುಭವಿಸಿದವರು ನಮ್ಮ ಬೆನ್ನಿಗೆ ಚೂರಿ ಹಾಕಿ ಹೋದರು. ಆದರೂ ಈ ದೇವೇಗೌಡ ಎಂದು ಎದೆಗುಂದದೇ ಈ ಇಳಿ ವಯಸ್ಸಿನಲ್ಲಿಯೂ ಹೋರಾಟ ಮುಂದುವರಿಸಿದ್ದೇನೆ ಎಂದು ತಿಳಿಸಿದರು.
2018 ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ದೇ ಮಾಡಿಸಿ ಅಪಮಾನ ಮಾಡಲೇಬೇಕು ಎಂದು ಪಿತೂರಿ ನಡೆಸಿ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದರೆ 2020ಕ್ಕೆ ರಾಜ್ಯದಲ್ಲಿ ಜೆಡಿಎಸ್ ನಿರ್ನಾಮವಾಗುತ್ತದೆ ಎಂದು ಸಂಚು ರೂಪಿಸಿ ನನ್ನ ಸೋಲಿಸಿದರು. ನಂತರ ಅವರೇ ಬಹಿರಂಗವಾಗಿ ನಾವೇ ಮಾಜಿ ಪ್ರಧಾನಿಗಳನ್ನು ಸೋಲಿಸಿದೆವು ಎಂದು ಹೇಳಿ ಗರ್ವದಿಂದ ಮೆರೆಯುತ್ತಿದ್ದಾರೆ ಅವರಿಗೆ ತಕ್ಕ ಪಾಠ ಕಲಿಸಲು ಜೆಡಿಎಸ್ ಕಾರ್ಯಕರ್ತರು ಮುಂದಾಗಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ದೇಶದ ಪ್ರಧಾನಿಯಾಗಿದ್ದಾಗ ಮೀಸಲಾತಿ ನೀಡುವ ಮೂಲಕ ಹಿಂದುಳಿತ ದಲಿತ ವರ್ಗದ ಮಹಿಳೆಯರು ಸೇರಿದಂತೆ ಸಣ್ಣ ಸಮುದಾಯಕ್ಕೂ ರಾಜಕೀಯ ಸ್ಥಾನ ಮಾನ ಸಿಗುವಂತೆ ಮಾಡಿದ್ದೇನೆ. ಈ ಸಾಮಾಜಿಕ ನ್ಯಾಯವೇ ನನಗೆ ಶಕ್ತಿ ನೀಡಿದೆ. ಯಾರೇ ಎಷ್ಟೇ ಸಂಚು ಪಿತೂರಿ ಮಾಡಿದರು ಪ್ರಾದೇಶಿಕ ಪಕ್ಷ ಜೆಡಿಎಸ್‌ನ್ನು ಮುಗಿಸಲು ಸಾಧ್ಯವಿಲ್ಲ ಮುಂದಿನ 2023ನೇ ವಿಧಾನ ಸಭಾ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇನೆ ಯಾರೂ ಏನೂ ಮಾಡುತ್ತಾರೋ ನಾನು ನೋಡುತ್ತೇನೆ ಈ ನನ್ನ ಹೋರಾಟಕ್ಕೆ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯರ್ತರೇ ಶಕ್ತಿಯಾಗಿದ್ದಾರೆ. ನನ್ನ ಹೋರಾಟ ಮುಂದುವರಿಯಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಗುಡುಗಿದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರು ಈ ಇಳಿವಯಸ್ಸಿನಲ್ಲಿಯೂ ಜೆಡಿಎಸ್ ಪಕ್ಷವನ್ನು ಹೋರಾಟ ಮಾಡಿ ಉಳಿಸಿಕೊಳ್ಳು ಮೂಲಕ ಮುಂದಿನ ಪೀಳಿಗೆಗೆ ಕೊಡಿಗೆ ನೀಡಲು ಶ್ರಮಿಸುತ್ತಿದ್ದಾರೆ. ಇದಕ್ಕೆ ನಾವೆಲ್ಲಾರು ಬೆನ್ನೆಲುಭಾಗಿ ನಿಲ್ಲಬೇಕೆಂದು. ಜೆಡಿಎಸ್ ಪಕ್ಷದ ಅಭ್ಯರ್ಥಿ ಅನಿಲ್‌ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ದೇವೇಗೌಡರ ಸೋಲಿಗೆ ಕಾರಣರಾಗಿರುವವರೆಗೆ ತಕ್ಕ ಪಾಠ ಕಲಿಸೋಣ ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆನಂಜನಪ್ಪ, ಮುಖಂಡರಾದ ಕಾಡರಾಮನಹಳ್ಳಿ ರಾಮಣ್ಣ, ವರದರಾಜು, ಬಿ.ಎನ್.ಲೋಕೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್, ವಕ್ತಾರ ತರೀಕೆರೆ ಪ್ರಕಾಶ್, ಹೇಮರಾಜು, ಕೆ.ಎಲ್.ಹರೀಶ್ ಮುಂತಾದವರು ಹಾಜರಿದ್ದರು.