Advertisement

ತಾಕ್ಕತ್ತಿದ್ದರೆ ಬಿಜೆಪಿಯವರು ಅವಿಶ್ವಾಸ ಮಂಡಿಸಲಿ: ದೇವೇಗೌಡ ಸವಾಲು

05:32 AM Feb 07, 2019 | Team Udayavani |

ಹೊಸದಿಲ್ಲಿ : ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ಮುಖ್ಯಸ್ಥರಾಗಿರುವ ಎಚ್‌ ಡಿ ದೇವೇಗೌಡ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದು ‘ತಾಕತ್ತಿದ್ದರೆ ರಾಜ್ಯದಲ್ಲಿನ ಕಾಂಗ್ರೆಸ್‌ -ಜೆಡಿಎಸ್‌ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿ’ ಎಂದು ತೊಡೆ ತಟ್ಟಿದ್ದಾರೆ. 

Advertisement

‘ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು; ರಾಜ್ಯದಲ್ಲಿನ ಸಮ್ಮಿಶ್ರ ಸರಕಾರ ಪತನವಾಗುತ್ತದೆ ಎಂದು ಈ ವರೆಗೆ  ಸಾವಿರ ಬಾರಿಯಾದರೂ ಹೇಳಿದ್ದಾರೆ; ಆದರೆ ಅಂಥದ್ದೇನೂ ಆಗಿಲ್ಲ. ಸಮ್ಮಿಶ್ರ ಸರಕಾರದ ಭವಿಷ್ಯ ಸದನದಲ್ಲೇ ತೀರ್ಮಾನವಾಗಬೇಕು’ ಎಂದು ದೇವೇಗೌಡ ಗುಡುಗಿದರು. 

‘ಬಿಜೆಪಿ ನಾಯಕರ ಲಂಗುಲಗಾಮಿಲ್ಲದ ಹೇಳಿಕೆಗಳ ಬಗ್ಗೆ ನಾನೇನೂ ಹೇಳುವುದಿಲ್ಲ; ಅವರೇನು ಮಾಡ್ತಾರೋ ಅದನ್ನು ಮಾಡಲಿ; ಸಮ್ಮಿಶ್ರ ಸರಕಾರಕ್ಕೆ ಬಹುಮತದ ಕೊರತೆ ಉಂಟಾಗಿ ಅದು ಅಲ್ಪ ಮತಕ್ಕೆ ಕುಸಿದಿದೆ ಎಂದು ಅವರಿಗೆ ಅನ್ನಿಸಿದರೆ ಅದನ್ನು ಅವರು ಸಾಬೀತು ಪಡಿಸಲಿ’ ಎಂದು ದೇವೇಗೌಡ ಖಡಕ್‌ ಮಾತನ್ನಾಡಿದರು. 

‘ಪ್ರತಿಯೋರ್ವ ಶಾಸಕರಿಗೂ ಅವರದ್ದೇ ಆದ ಕೆಲಸಗಳು, ಜರೂರುಗಳು ಇರುತ್ತವೆ. ಹಾಗಾಗಿ ಕೆಲವರು ಸದನದಲ್ಲಿ ಕೆಲವೊಮ್ಮೆ ಹಾಜರಿರುವುದಿಲ್ಲ. ಕೆಲವರು ಸರಕಾರದ ಮೇಲಿನ ಸಿಟ್ಟಿನಿಂದ ಸದನಕ್ಕೆ ಬಾರದಿರುವ ಸಾಧ್ಯತೆಯೂ ಇದೆ; ಹಾಗಿದ್ದರೂ ಸರಕಾರಕ್ಕೆ ಗೈರು ಶಾಸಕರ ಬೆಂಬಲ ಇಲ್ಲ ಎಂದು ಅನುಮಾನಿಸುವುದು ಸರಿಯಲ್ಲ; ಅಂತಹ ನಂಬಿಕೆ ಅವರಿಗಿದ್ದರೆ ಅವರು ಅವಿಶ್ವಾಸ ಗೊತ್ತುವಳಿ ಮಂಡಿಸಲಿ’ ಎಂದು ದೇವೇಗೌಡ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next