Advertisement
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಬಿಕೆ ದ್ರೋಹ, ವಿಶ್ವಾಸ ದ್ರೋಹಕ್ಕೆ ಮತ್ತೂಂದು ಹೆಸರು ದೇವೇಗೌಡರು ಹಾಗೂ ಕುಮಾರಸ್ವಾಮಿ. ನನ್ನನ್ನು ಮಂತ್ರಿ ಮಾಡಿ ಎಂದು ಅವರ ಮನೆ ಬಾಗಿಲಿಗೆ ಹೋಗಿದ್ದೇನಂತೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಲು ಅವರಿಗೆ ನಾಚಿಕೆಯಾಗಬೇಕು. ಧರ್ಮಸಿಂಗ್ ಅವರಿಗೆ ಕೈಕೊಟ್ಟು ನನ್ನೊಂದಿಗೆ 20 ತಿಂಗಳ ಆಡಳಿತ ನಡೆಸಲು ಬಂದಿದ್ದು ನಿಜ. ಆಮೇಲೆ ದ್ರೋಹ ಮಾಡಿದಿರಿ. 20 ತಿಂಗಳ ಆಡಳಿತ ನಡೆಸಿ ಬಳಿಕ ಕೈಕೊಟ್ಟವರು ನೀವು. ಈಗ ನನ್ನನ್ನೇ ಟೀಕೆ ಮಾಡುತ್ತೀರಾ. ಒಬ್ಬ ಮಾಜಿ ಪ್ರಧಾನಿಯಾಗಿದ್ದವರು ಆಡುವಂತಹ ಮಾತುಗಳೇ ಇವು? ಎಂದು ಕಿಡಿ ಕಾರಿದರು. ಈ ಮೂಲಕ ಕುಮಾರ ಸ್ವಾಮಿ ಅವರ ಟೀಕೆಗಳಿಗೆ ತಿರುಗೇಟು ನೀಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದಿದೆ. ಅಪ್ಪ, ಮಕ್ಕಳೆಲ್ಲ ಸೇರಿ ಗೆದ್ದಿರುವುದು 38. ಇದೆಲ್ಲ ಗೊತ್ತಿದ್ದರೂ ದುರಹಂಕಾರ, ದರ್ಪದಿಂದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಬೆಂಬಲ ನೀಡದಿದ್ದರೆ ತಬ್ಬಲಿಗಳಂತೆ ರಸ್ತೆಯಲ್ಲಿ ನಿಲ್ಲಬೇಕಿತ್ತು ಎಂಬ ಅರಿವು ಕುಮಾರಸ್ವಾಮಿ ಅವರಿಗಿರಬೇಕು. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಅನಂತರ ರಾಜ್ಯದಲ್ಲಿ 225ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 100ಕ್ಕೂ ಹೆಚ್ಚು ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದೆ. ಸಾಲ ಮನ್ನಾ ಮಾಡಿರುವ ಮೊತ್ತ ಎಷ್ಟು? ಬರ ನಿರ್ವಹಣೆಗೆ ಬಿಡುಗಡೆ ಮಾಡಿದ ಅನುದಾನವೆಷ್ಟು ಎಂಬುದನ್ನು ಬಹಿರಂಗಪಡಿಸಲಿ ಎಂದು ಹೇಳಿದರು. ಸಹಕಾರ ಕ್ಷೇತ್ರ ದಿವಾಳಿಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ನೀಡುತ್ತಾ, ಜಮೀನು ಹರಾಜು ಮಾಡುತ್ತಿವೆ. ಸಾಲ ಮನ್ನಾ ಮಾಡಿರುವುದಾಗಿ ಬುರುಡೆ ಹೊಡೆದುಕೊಂಡು ಸುಳ್ಳು ಹೇಳುತ್ತಾ ಕಾಲ ಹರಣ ಮಾಡುತ್ತಿರುವುದು ಖಂಡನೀಯ. ಈ ರೀತಿಯ ರಾಜಕೀಯ ದೊಂಬರಾಟ ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಕೊಡಲಿ. ಮಾತೆತ್ತಿದ್ದರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎನ್ನುವ ಕುಮಾರಸ್ವಾಮಿಯವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನ ಎಂಬುದು ತಿಳಿದಿರಲಿ ಎಂದು ಹೇಳಿದರು.
Related Articles
“1994ರಲ್ಲಿ ರಾಮಕೃಷ್ಣ ಹೆಗಡೆಯವರಿಗೆ ಚಪ್ಪಲಿಯಲ್ಲಿ ಹೊಡೆಸಿದವರು ಯಾರು?
1993ರಲ್ಲಿ ರಾಮಕೃಷ್ಣ ಹೆಗಡೆಯವರ ಕಾಲು ಹಿಡಿದು ಜನತಾದಳದ ಅಧ್ಯಕ್ಷರಾದವರು ಯಾರು ದೇವೇಗೌಡರೇ?
1998-99ರಲ್ಲಿ ಹೆಗಡೆ ಅವರನ್ನು ಪಕ್ಷದಿಂದ ಹೊರ ಹಾಕಿದವರು ಯಾರು?
1988ರಲ್ಲಿ ಎಸ್.ಆರ್. ಬೊಮ್ಮಾಯಿ ಅವರಿಗೆ ದೇವೇಗೌಡರು ಮಾಡಿದ ಉಪಕಾರ ಏನು?’ ಎಂದು ಮಾರ್ಮಿಕವಾಗಿ ನುಡಿದರು. ಕಳೆದ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡರನ್ನು ಕಣಕ್ಕಿಳಿಸಿ ಸಿದ್ದರಾಮಯ್ಯರನ್ನು ಸೋಲಿಸಿ ಅವಮಾನ ಮಾಡಿದರು. ಒಂದೊಮ್ಮೆ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಗೆಲ್ಲದಿದ್ದರೆ ಅವರ ಪರಿಸ್ಥಿತಿ, ಭವಿಷ್ಯ ಏನಾಗುತ್ತಿತ್ತೋ ಏನೋ? ಸಿದ್ದರಾಮಯ್ಯ ಅವರು ಎಲ್ಲ ಅವಮಾನ ಸಹಿಸಿಕೊಂಡು ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದುಕೊಂಡಿದ್ದೇನೆ ಎಂದರು.
Advertisement