ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚರ್ಚೆಯ ವಿಷಯವಾಗಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು ಇಂದು ಅಧಿಕೃತವಾಗಲಿದೆ ಎನ್ನಲಾಗಿತ್ತು. ಎಚ್ ಡಿ ದೇವೇಗೌಡರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಇದರ ಬಗ್ಗೆ ಮಾತನಾಡಬಹುದು ಎನ್ನಲಾಗಿತ್ತು. ಆದರೆ “ಮೈತ್ತಿ ವಿಚಾರವಾಗಿ ನಾನು ಏನೂ ಮಾತನಾಡಲ್ಲ. ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ” ಎಂದಷ್ಟೇ ಹೇಳಿದ ದೊಡ್ಡಗೌಡರು ಹೆಚ್ಚಿನ ವಿವರಣೆ ನೀಡಲಿಲ್ಲ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಿಂದ ದೆಹಲಿಗೆ ರಾಜ್ಯ ಸಭೆ ಕಲಾಪದಲ್ಲಿ ಭಾಗವಹಿಸಲು ಬಂದಿದ್ದೆ. ಮಂಡಿನೋವಿನ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಮುಂದೆ ಕೂರಲು ಆಗದೆ ಹಿಂದೆ ಕುಳಿತಿದ್ದೆ. ಮಹಿಳಾ ಮೀಸಲಾತಿ ಹಾಗು ಕಾವೇರಿ ವಿಚಾರವಾಗಿ ಕಲಾಪದಲ್ಲಿ ಮಾತನಾಡಿದ್ದೇನೆ ಎಂದರು.
ಇದನ್ನೂ ಓದಿ:Dandeli: ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ: ಓರ್ವನ ಬಂಧನ
ಕಾವೇರಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಎಂಎಲ್ ಸಿಯೊಬ್ಬರನ್ನು ನನ್ನಬಳಿ ಕಳುಹಿಸಿದ್ದರು. ನನ್ನ ಸಹಕಾರವಿದೆ ಎಂದು ಹೇಳಿದ್ದೆ. ನಾನು ಸಂಸದರ ಸಭೆಯಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದರು. ಕಾವೇರಿ ವಿಚಾರವಾಗಿ ವಸ್ತುಸ್ಥಿತಿ ಅರಿಯಲು ಬೇರೆ ರಾಜ್ಯದ ಅಧಿಕಾರಗಳನ್ನು ಕಳಿಸುವಂತೆ ಸಲಹೆ ನೀಡಿದ್ದೆ ಎಂದರು.
ರಾಜ್ಯಸಭೆಯಲ್ಲಿ ಕಾವೇರಿ ವಿಚಾರದಲ್ಲಿ ನಾನೊಬ್ಬನೆ ಮಾತನಾಡಿದೆ ಎಂದ ಅವರು, ಮಲ್ಲಿಕಾರ್ಜುನ ಖರ್ಗೆ ಮಾತನಾಡಲಿಲ್ಲ ಎಂಬ ಪ್ರಶ್ನೆಗೆ ‘ಈ ಬಗ್ಗೆ ನನ್ನ ಬಾಯಲ್ಲಿ ಏನೇನು ಹೇಳಿಸಬೇಡಿ. ಅವರೊಬ್ಬರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು’ ಎಂದರು.