Advertisement

Congress Vs JDS “ಈ ಹಿಂದೆ ನೀವೂ ಫುಟ್ ಬಾಲ್ ಆಡಿಲ್ಲವೇ?’ಎಚ್‌ಡಿಡಿಗೆ ಡಿಕೆಶಿ ತಿರುಗೇಟು

08:43 PM Oct 02, 2023 | Team Udayavani |

ಬೆಂಗಳೂರು: ಈ ಹಿಂದೆ ನೀವು ಕೂಡ ಕಾಂಗ್ರೆಸ್‌ನಿಂದ ಅನೇಕ ನಾಯಕರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚೆಸ್‌, ಫುಟ್ ಬಾಲ್ ಆಡಿಲ್ಲವೇ? ನಿಮ್ಮ ಸುಪುತ್ರರು ದಿನ ಬೆಳಗಾದರೆ ಸಿದ್ಧಾಂತ ಬದಲಿಸಿಕೊಂಡು ಯಾರ ಜತೆಗಾದರೂ ಸಂಬಂಧ ಬೆಳೆಸುತ್ತಾರೆ. ಹಾಗಿದ್ದರೆ, ಸಿದ್ಧಾಂತ ನಂಬಿರುವ ಕಾರ್ಯಕರ್ತರ ಕತೆ ಏನು?

Advertisement

– ಜೆಡಿಎಸ್‌ ವರಿಷ್ಠ ದೇವೇಗೌಡ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೀಡಿದ ತಿರುಗೇಟು ಇದು.

“ಮಿಸ್ಟರ್‌ ಡಿ.ಕೆ. ಶಿವಕುಮಾರ್‌, ಜೆಡಿಎಸ್‌ ಅನ್ನು ದುರ್ಬಲಗೊಳಿಸುತ್ತೇನೆ ಎಂಬುದು ನಿಮ್ಮ ಭ್ರಮೆ. ನಿಮ್ಮ ಆಟ ನಡೆಯಲ್ಲ’ ಎಂದು ಎಚ್‌.ಡಿ. ದೇವೇಗೌಡ ಎಚ್ಚರಿಕೆ ನೀಡಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ಬಹಳ ಗೌರವದಿಂದ ನಿಮ್ಮ ಮಾತನ್ನು ನಾನು ಸ್ವೀಕರಿಸುತ್ತೇನೆ. ಆದರೆ, ಈ ಹಿಂದೆ ನೀವೂ ಕಾಂಗ್ರೆಸ್‌ನಿಂದ ಅನೇಕ ನಾಯಕರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚೆಸ್‌, ಫುಟ್ ಬಾಲ್ ಆಡಿಲ್ಲವೇ? ಈಚೆಗೆ ನಮ್ಮ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಸಿ.ಎಂ. ಇಬ್ರಾಹಿಂ ಅವರನ್ನು ಆ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಕರೆದುಕೊಂಡು ಹೋಗಿ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿಲ್ಲವೇ? ಅಷ್ಟಕ್ಕೂ ನಿಮ್ಮ ಸುಪುತ್ರರು ದಿನಬೆಳಗಾದರೆ ಸಿದ್ಧಾಂತ ಬದಲಿಸುತ್ತಾರೆ, ಯಾರ ಜೊತೆ ಬೇಕಾದರೂ ಸಂಬಂಧ ಬೆಳೆಸುತ್ತಾರೆ. ಆದರೆ ಸಿದ್ಧಾಂತ ನಂಬಿರುವ ಕಾರ್ಯಕರ್ತರು ಏನಾಗಬೇಕು’ ಎಂದು ಕೇಳಿದರು.

ನಾನು ಹೆದರಲ್ಲ ಅನ್ನೋದು ನಿಮಗೆ ಗೊತ್ತು: “ಹೆದರಿಸಿದರೆ ನಾನು ಹೆದರುವುದಿಲ್ಲ ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ನಾನು ಸಾತನೂರು, ಕನಕಪುರದಲ್ಲಿ 1985ರಿಂದ ಇಲ್ಲಿಯವರೆಗೂ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನನ್ನ ಜತೆ ನನ್ನ ಸಹೋದರ ಸುರೇಶ್‌, ತೇಜಸ್ವಿನಿ ಅವರೂ ರಾಜಕಾರಣ ಮಾಡಿದ್ದಾರೆ. ಹಿಂದೆ ನಾವು ನಿಮ್ಮ ಜತೆಯೂ ಕೈ ಜೋಡಿಸಿದ್ದೇವೆ, ನಿಮಗೂ ಶಕ್ತಿ ತುಂಬಿದ್ದೇವೆ. ಯಾವ ಸಂದರ್ಭದಲ್ಲಿ ಯಾರು ಏನು ಮಾತನಾಡಿದ್ದಾರೆ ಎಂಬ ಅರಿವು ನಮಗಿದೆ. ಹಳೆಯದನ್ನು ಕೆದಕಿ ಉತ್ತರ ಕೊಡುವ ಅಗತ್ಯವಿಲ್ಲ. ನೀವು ಎಷ್ಟು ವಾರ್ನಿಂಗ್‌ ಕೊಟ್ಟರೂ ನಿಮ್ಮ ಸುಪುತ್ರರ ಕ್ಷೇತ್ರದಲ್ಲಿ ನಿಮ್ಮನ್ನು ಸಾಕಿ ಬೆಳೆಸಿದ ಜನ ಇಂದು ಕಾಂಗ್ರೆಸ್‌ ಸೇರಲು ಬಂದಿದ್ದಾರೆ. ಇಲ್ಲಿ ಬಂದಿರುವ ಎಲ್ಲರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ’ ಎಂದು ತಿಳಿಸಿದರು.

Advertisement

ಬನ್ನಿ ಅಂತ ಕರೆಯಲ್ಲ, ಬಂದವರನ್ನು ಬೇಡ ಅನ್ನಲ್ಲ
“ನಾನು ಯಾರನ್ನೂ ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆಯುವ ಅಗತ್ಯವಿಲ್ಲ, ಸಾಗರೋಪಾದಿಯಲ್ಲಿ ಬೇರೆ ಪಕ್ಷಗಳ ಕಾರ್ಯಕರ್ತರು ನಮ್ಮಲ್ಲಿಗೆ ಆಗಮಿಸುತ್ತಿದ್ದಾರೆ. ಬೀದರ್‌ನಿಂದ ಚಾಮರಾಜನಗರದವರೆಗೂ ಯಾವುದೇ ಜಿಲ್ಲೆ ಯಲ್ಲಿನ ನಾಯಕರು ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ. ಕಾಂಗ್ರೆಸ್‌ ಯಾವೊಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

“ಕುಮಾರಸ್ವಾಮಿ ಅವರು ಬಿಜೆಪಿ ಮೈತ್ರಿಯಿಂದ 5 ವರ್ಷಗಳಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ. ಪಕ್ಷದ ದಂಡನಾಯಕನಾಗಿ ಎಷ್ಟು ಬಾರಿ ನಿವೃತ್ತಿ ಘೋಷಿಸುತ್ತೀರಿ? ನಿಮ್ಮನ್ನು ನಂಬಿರುವ ನಾಯಕರು ಕಾರ್ಯಕರ್ತರು ಏನಾಗಬೇಕು? ನೀವು ದಿನಬೆಳಗಾದರೆ ಯಾರ ಜತೆ ಬೇಕಾದರೂ ಸಂಬಂಧ ಬೆಳೆಸಬಹುದು. ಆದರೆ, ಸಿದ್ಧಾಂತದ ಮೇಲೆ ರಾಜಕಾರಣ ಮಾಡುವ ನಾಯಕರು, ಕಾರ್ಯಕರ್ತರು ಏನಾಗಬೇಕು’ ಎಂದು ಪ್ರಶ್ನಿಸಿದರು.

“ರಾಜಕಾರಣ ಏನೇ ಇರಲಿ, ಬಿಜೆಪಿ ಜತೆ ಮೈತ್ರಿ ಮೂಲಕ ನೀವು ಕಳುಹಿಸಿರುವ ಸಂದೇಶವನ್ನು ಮುಗ್ಧ ಜನ ಹೇಗೆ ಸ್ವೀಕರಿಸಬೇಕು? ಇಂತಹ ಪರಿಸ್ಥಿತಿಯಲ್ಲಿ ಸಿದ್ಧಾಂತ ನಂಬಿ ನಮ್ಮ ಪಕ್ಷಕ್ಕೆ ಬಂದವರನ್ನು ಪಕ್ಷದ ಅಧ್ಯಕ್ಷನಾಗಿ ನಾನು ಕರೆದುಕೊಳ್ಳಬಾರದೆ? ಅನೇಕರು ಈಗ ಕಾಂಗ್ರೆಸ್‌ ಕಡೆ ನೋಡುತ್ತಿದ್ದಾರೆ. ರಾಜ್ಯದ ಪ್ರತಿ ಮನೆ-ಮನೆಗೂ ಹಾಗೂ ಕಾರ್ಯಕರ್ತರ ಬಳಿ ಹೋಗಿ ಕೈ ಮುಗಿದು ದೇಶ ಉಳಿಸೋಣ ಬನ್ನಿ ಎಂದು ಪಕ್ಷಕ್ಕೆ ಸೇರಿಸಿಕೊಳ್ಳುವ ಅಧಿಕಾರವನ್ನು ನಮ್ಮ ನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ನಮಗೆ ಕೊಟ್ಟಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next