Advertisement

ತಡೆಯಾಜ್ಞೆ ನೀಡಲು ಹೈಕೋರ್ಟ್‌ ನಿರಾಕರಣೆ

10:52 PM Nov 06, 2019 | Lakshmi GovindaRaju |

ಬೆಂಗಳೂರು: ಟಿಪ್ಪು ಜಯಂತಿ ರದ್ದು ಪಡಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಹೈಕೋರ್ಟ್‌, ರದ್ದು ಆದೇಶ ಸಂಬಂಧ ಮರು ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Advertisement

ಟಿಪ್ಪು ಜಯಂತಿ ರದ್ದುಪಡಿಸಿ 2019ರ ಜುಲೈ 30ರಂದು ರಾಜ್ಯ ಸರಕಾರ ಹೊರಡಿಸಿರುವ ಆದೇಶ ರದ್ದು ಪಡಿಸುವಂತೆ ಕೋರಿ ಉತ್ತರ ಪ್ರದೇಶದ ಲಖನೌ ನಿವಾಸಿ ಬಿಲಾಲ್‌ ಆಲಿ ಷಾ, ಟಿಪ್ಪು ಸುಲ್ತಾನ್‌ ಯುನೈಟೆಡ್‌ ಫ್ರಂಟ್‌ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಹಾಗೂ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ, ಸರ್ಕಾರದ ವಾದ ಹಾಗೂ ಅರ್ಜಿದಾರ ಪರ ವಕೀಲರ ಪ್ರತಿವಾದ ಆಲಿಸಿದ ನ್ಯಾಯಪೀಠ, ಟಿಪ್ಪು ಜಯಂತಿ ರದ್ದು ಆದೇಶಕ್ಕೆ ತಡೆಯಾಜ್ಞೆ ನೀಡಲು ಸ್ಪಷ್ಟವಾಗಿ ನಿರಾಕರಿಸಿತು. ಜತೆಗೆ, ರಾಜ್ಯ ಸರಕಾರ ಜಯಂತಿ ರದ್ದು ಮಾಡುವಾಗ ಹಿಂದಿನ ಸರಕಾರ ಹೊರಡಿಸಿದ್ದ ಆದೇಶದ ಎಲ್ಲ ಅಂಶಗಳನ್ನು ಪರಿಗಣಿಸಿಲ್ಲ ಎಂಬ ಅಂಶದ ಹಿನ್ನೆಲೆಯಲ್ಲಿ ಈ ಸಂಬಂಧ ರದ್ದು ಆದೇಶದ ನಿರ್ಧಾರವನ್ನು ಎರಡು ತಿಂಗಳಲ್ಲಿ ಮರು ಪರಿಶೀಲನೆ ನಡೆಸಬೇಕು.

ಅಷ್ಟೇ ಅಲ್ಲದೆ, ಟಿಪ್ಪು ಜಯಂತಿ ಮಾತ್ರವಲ್ಲದೆ ರಾಜ್ಯದಲ್ಲಿ ಸರಕಾರದ ವತಿಯಿಂದ ಅಧಿಕೃತವಾಗಿ ಆಚರಿಸುತ್ತಿರುವ ಇತರ ಎಲ್ಲ ಜಯಂತಿಗಳ ಬಗ್ಗೆ ಮತ್ತು ಆ ಕುರಿತು ಹೊರಡಿಸಿರುವ ಆದೇಶಗಳ ಬಗ್ಗೆ ಸಮಗ್ರ ವಿವರಗಳನ್ನು ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ವಿಚಾರಣೆ ವೇಳೆ ನ್ಯಾಯಪೀಠ, 2016ರಲ್ಲಿ ಸಲ್ಲಿಕೆಯಾಗಿದ್ದ ಪಿಐಎಲ್‌ ಸಂಬಂಧ ಟಿಪ್ಪು ಜಯಂತಿ ಆಚರಣೆಯನ್ನು ಏಕೆ ಆಚರಿಸಲಾಗುತ್ತಿದೆ ಎಂಬ ಬಗ್ಗೆ ವಿಸ್ತ್ರತ ಅಂಶಗಳ ಆದೇಶ ಹೊರಡಿಸಿತ್ತು.

ಆದರೆ, ಇದೀಗ ಸರಕಾರ ಒಂದೇ ದಿನದಲ್ಲಿ ಕೊಡಗಿನ ಒಬ್ಬರೇ ಒಬ್ಬ ಶಾಸಕ ನೀಡಿದ ಮನವಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೂ ಮುನ್ನ ಯಾವ ಅಭಿಪ್ರಾಯ ಸಂಗ್ರಹ ಮಾಡಿಲ್ಲ. ಹಿಂದಿನ ಸರಕಾರ ನೀಡಿದ್ದ ಆದೇಶದ ಅಂಶಗಳನ್ನೂ ಸಹ ಅವಲೋಕಿಸಿಲ್ಲ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟಿತು. ಅಷ್ಟೇ ಅಲ್ಲದೆ, ಜಾತ್ಯಾತೀತತೆ ಹಾಗೂ ಸಂವಿಧಾನದ ಕಲಂ 51ಎ ಅನ್ವಯ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಿದೆ.

Advertisement

ಸುಪ್ರೀಂಕೋರ್ಟ್‌ ಇಂತಹ ನಿರ್ಧಾರಗಳನ್ನು ಕೈಗೊಳ್ಳು ವಾಗ ಏಕಪಕ್ಷೀಯವಾಗಿ ಕೈಗೊಳ್ಳುವಂತಿಲ್ಲ ಎಂದು ಹೇಳಿದೆ. ಹಾಗಾಗಿ, ಸರಕಾರ ಮತ್ತೂಮ್ಮೆ ತನ್ನ ನಿರ್ಧಾರ ವನ್ನು ಸಮರ್ಪಕ ರೀತಿಯಲ್ಲಿ ಮರು ಪರಿಶೀಲನೆ ಮಾಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು. ಸೂಕ್ತ ಭದ್ರತೆ: ಸರಕಾರ ವೈಯಕ್ತಿಕವಾಗಿ ಟಿಪ್ಪು ಜಯಂತಿ ಆಚರಣೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹೀಗಾಗಿ, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ನ.10ರಂದು ಟಿಪ್ಪು ಜಯಂತಿ ಆಚರಿಸಬಹುದು. ಅದಕ್ಕೆ ಸರಕಾರ ಸೂಕ್ತ ಭದ್ರತೆಯನ್ನು ಒದಗಿಸಲಿದೆ ಎಂದು ನ್ಯಾಯಪೀಠ ಆದೇಶ ನೀಡಿದೆ.

ಸರ್ಕಾರದ ವಾದ ಏನು?: ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಸರಕಾರದಿಂದ ಟಿಪ್ಪು ಜಯಂತಿ ಆಚರಿಸುವುದಿಲ್ಲ. ಖಾಸಗಿ ಸಂಸ್ಥೆಗಳು ಆಚರಿಸುವುದಕ್ಕೆ ಸರಕಾರದ ಅಭ್ಯಂತರವಿಲ್ಲ. ಇದು ಸರಕಾರದ ಆಡಳಿತಾತ್ಮಕ ನಿರ್ಧಾರ. ಇದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು. ಸರಕಾರ ಗುಪ್ತಚರ ದಳ ಮತ್ತಿತರ ವಿಭಾಗಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಜಯಂತಿ ಆಚರಿಸಿದರೆ ಶಾಂತಿ ಕದಡುತ್ತದೆ ಎಂಬ ಕಾರಣಕ್ಕೆ ಜಯಂತಿಯನ್ನು ರದ್ದುಗೊಳಿಸುವ ತೀರ್ಮಾನ ಮಾಡಿದೆ ಎಂದು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಅಲ್ಲದೆ, ಮೊದಲ ಬಾರಿಗೆ ಟಿಪ್ಪು ಜಯಂತಿ ಆಚರಿಸಿದಾಗ ಕೊಡಗಿನಲ್ಲಿ ಹಿಂಸಾಚಾರ ನಡೆದಿತ್ತು. ಓರ್ವ ವ್ಯಕ್ತಿ ಕೊಲೆಗೀಡಾದ. ಹಾಗಾಗಿ, ಕೋಮು ಸಾಮರಸ್ಯ ಕಾಪಾಡಲು ಜಯಂತಿ ರದ್ದುಪಡಿಸಲಾಗಿದೆ. ಇಲ್ಲಿ ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗಿಲ್ಲ. ಹಕ್ಕುಗಳ ಉಲ್ಲಂಘನೆಯೂ ಆಗಿಲ್ಲ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನೂ ಇಲ್ಲ. ಹಾಗಾಗಿ, ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ಕೋರಿದರು.

ಅರ್ಜಿದಾರರ ವಾದ ಏನು?: ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌ ವಾದಿಸಿ, ಜು.26ರಂದು ಬಿ.ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, 27ರಂದು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಿದರು. 29ರಂದು ಕೊಡಗಿನ ಓರ್ವ ಜನಪ್ರತಿ ನಿಧಿ ನೀಡಿದ ಮನವಿ ಆಧರಿಸಿ ಯಾವುದೇ ಅಭಿಪ್ರಾಯಗಳನ್ನು ಪಡೆಯದೆ, ಸಂಪುಟದಲ್ಲಿ ಚರ್ಚೆ ನಡೆಸದೆ, ಸಿಎಂ ಒಬ್ಬರೇ ಒಂದೇ ದಿನದಲ್ಲಿ ಟಿಪ್ಪು ಜಯಂತಿ ರದ್ದುಗೊಳಿಸಲು ತೀರ್ಮಾನಿಸಿದರು.

ಆ ತೀರ್ಮಾನ ಏಕಪಕ್ಷೀಯವಾದುದು ಎಂದು ವಿವರಿಸಿದರು. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಗುರಿಯಾಗಿ ಟ್ಟುಕೊಂಡು ಟಿಪ್ಪು ಜಯಂತಿ ರದ್ದುಗೊಳಿ ಸಲಾಗಿದೆ. ಇದು ಕಾನೂನು ಬಾಹಿರ ಮತ್ತು ತಾರತಮ್ಯದಿಂದ ಕೂಡಿದ ಕ್ರಮ. ಸರಕಾರ ತನ್ನ ನೀತಿ ನಿರ್ಧಾರಗಳನ್ನು ಬದಲಿಸುವಾಗ ಕಾರಣಗಳನ್ನು ನೀಡ ಬೇಕು. ಆದರೆ, ಸರಕಾರ ಯಾವುದೇ ಕಾರಣ ನೀಡಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next