Advertisement

ಮಳೆ ಆವಾಂತರ: ಸರ್ಕಾರದ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ವಾಗ್ಧಾಳಿ

07:12 PM Jun 18, 2022 | Team Udayavani |

ಬೆಂಗಳೂರು: ನಗರದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವುದು ಮತ್ತು ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವುದನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಈ ಸಾವುಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಸಿನಿಮಾ ದೃಶ್ಯದಲ್ಲಿ ನಾಯಿ ಸತ್ತಿದ್ದಕ್ಕೆ ಕಣ್ಣೀರಿಟ್ಟ ಮುಖ್ಯಮಂತ್ರಿಗಳಿಗೆ ಈಗ ಕಣ್ಣೀರು ಬರುತ್ತಿಲ್ಲ, ಯಾಕೆ ಎಂದು ಪ್ರಶ್ನಿಸಿ, ಮಳೆಯಿಂದ ಆಗುತ್ತಿರುವ ಪ್ರತಿ ಸಾವಿಗೂ ಸರ್ಕಾರವೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆ.ಆರ್‌. ಪುರ ವಿಧಾನಸಭಾ ಕ್ಷೇತ್ರವು ನಿರಂತರವಾಗಿ ಮಳೆಯ ಅವಾಂತರಕ್ಕೆ ತುತ್ತಾಗುತ್ತಿದ್ದು, ಎಲ್ಲೆಡೆ ರಾಜಕಾಲುವೆಗಳ ಒತ್ತುವರಿಯ ದೂರು ಕೇಳಿ ಬರುತ್ತಿದೆ. ಕಳೆದ 9 ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಕ್ಷೇತ್ರಕ್ಕೆ ಅನುದಾನ ಮಂಜೂರಾಗಿದ್ದರೂ ಅಭಿವೃದ್ಧಿ ಕೆಲಸಗಳು ಆಗಿಲ್ಲ. ರಾಜಕಾಲುವೆಯಲ್ಲಿ ನತದೃಷ್ಟ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ಗೋಡೆ ಕುಸಿದು ಮಹಿಳೆಯೊಬ್ಬರು ಅಸುನೀಗಿದ್ದಾರೆ.

ಎಸ್‌.ಆರ್‌. ಲೇಔಟ್‌ನಲ್ಲಿನ ಅಪಾರ್ಟ್‌ಮೆಂಟ್‌ ಜಲಾವೃತವಾಗಿದೆ. ನೆಲಮಹಡಿ ಸಂಪೂರ್ಣ ಜಲಾವೃತವಾಗಿ, 100 ಕಾರು, 300 ಬೈಕುಗಳು ತೇಲಿವೆ. ನಿವಾಸಿಗಳು ಹೊರ ಬರಲಾಗದೆ ಮನೆಗಳಲ್ಲೇ ಬಂಧಿಗಳಾಗಿದ್ದಾರೆ. ಕೆ.ಆರ್‌.ಪುರ ಕ್ಷೇತ್ರದಲ್ಲಿ ಬಹುತೇಕ ಅಪಾರ್ಟ್‌ಮೆಂಟ್‌ಗಳ ಹಣೆಬರಹ ಇಷ್ಟೇ ಆಗಿದೆ. ಕೆ.ಆರ್‌ ಪುರದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಗೆ ಮಳೆನೀರು ನುಗ್ಗಿ ದಾಖಲೆಗಳು ಸಂಪೂರ್ಣ ನಾಶವಾಗಿವೆ. ಕಂಪ್ಯೂಟರ್‌ಗಳು ನೀರುಪಾಲಾಗಿ, ಈ ಸಾಲಿನ ಎಸ್‌ಎಸ್‌ಎಲ್‌ಸಿ ಮಕ್ಕಳ ದಾಖಲೆಗಳು ಕೊಚ್ಚಿ ಹೋಗಿವೆ.

ನಮಗೆ ನಿಮ್ಮ ಪರಿಹಾರ ಬೇಡ, ರಾಜಕಾಲುವೆ ಸಮಸ್ಯೆ ಬಗೆಹರಿಸಿ ಎಂದು ಸ್ಥಳೀಯರು ಸಚಿವರಿಗೆ ಬೆಳಗ್ಗೆಯೇ ಮಂಗಳಾರತಿ ಮಾಡಿದ್ದಾರೆ. ಆ ಸಚಿವರಿಗೆ ಅನುದಾನದ ಮೇಲಿರುವ ಅಕ್ಕರೆ ಜನರ ಮೇಲೆ ಇಲ್ಲ. ಬೇಜವಾಬ್ದಾರಿ ಬಿಬಿಎಂಪಿಗೆ ನ್ಯಾಯಾಲಯ ಛೀಮಾರಿ ಹಾಕಿದರೂ, ಅದಕ್ಕೆ ನಾಚಿಕೆ ಇಲ್ಲ. ಅವರ ಜತೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಜನರಿಗೆ ಧಮ್ಕಿ ಹಾಕಿದ್ದಾರೆ. ಅಧಿಕಾರ ಕೊಟ್ಟ ಜನರ ಮುಂದೆಯೇ ಅಹಂಕಾರವೇ?

Advertisement

ರಾಜಕಾಲುವೆಗೆ ಬಲಿಯಾದ ಯುವಕನಿಗೆ ಸೂಕ್ತ ಪರಿಹಾರ ನೀಡಬೇಕು. ಮುಖ್ಯಮಂತ್ರಿಗಳು ಇಡೀ ಕೆ.ಆರ್‌. ಪುರವನ್ನು ಸುತ್ತಿ, ಎಲ್ಲ ಸಮಸ್ಯೆಗಳಿಗೆ ತುರ್ತು ಪರಿಹಾರ ಕಂಡುಕೊಳ್ಳಬೇಕು. 9 ವರ್ಷದಿಂದ ಆ ಕ್ಷೆತ್ರಕ್ಕೆ ನೀಡಿರುವ ಅನುದಾನ, ಮತ್ತದರ ಬಳಕೆಯ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next