ಬೆಂಗಳೂರು: ಸಾರ್ವಜನಿಕ ಮನರಂಜನಾ ತಾಣಗಳ (ಬೆಂಗಳೂರು ನಗರ) ನಿಯಂತ್ರಣ ಮತ್ತು ಪರವಾನಗಿ ನಿಯಮ 2005ರ ಅಡಿಯಲ್ಲಿ ಪರವಾನಗಿ ಪಡೆಯದ ಪಬ್ ಮತ್ತು ಬಾರ್‌ಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು.
ಇಂದಿರಾನಗರ ಪ್ರದೇಶದಲ್ಲಿ ಮಿತಿ ಮೀರಿದ ಶಬ್ದ ಮಾಲಿನ್ಯವಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನಗರದಲ್ಲಿ ಸಾರ್ವಜನಿಕ ಮನರಂಜನಾ ತಾಣಗಳ(ಬೆಂಗಳೂರು ನಗರ) ನಿಯಂತ್ರಣ ಮತ್ತು ಪರವಾನಗಿ ನಿಯಮ 2005ರ ಪಾಲನೆ ಆಗುತ್ತಿಲ್ಲ. ಸರ್ಕಾರ ಮತ್ತು ಪೊಲೀಸರು ಆ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ. ಪರಿಣಾಮವಾಗಿ ಪಬ್ ಹಾಗೂ ಬಾರ್‌ಗಳಲ್ಲಿ ಮಧ್ಯರಾತ್ರಿಯೂ ಏರುಧ್ವನಿಯ ಸಂಗೀತ ಕೇಳಿಬರುತ್ತದೆ. ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ತೀವ್ರ ತೊಂದರೆ ಆಗುತ್ತಿದೆ ಎಂದರು.
ಆಗ, 2005ರ ನಿಯಮ ಜಾರಿಗೆ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಹಾಗೂ ನಿಯಮಗಳಡಿ ಪರವಾನಗಿ ಪಡೆಯದ ಪಬ್ ಮತ್ತು ಬಾರ್‌ಗಳ ವಿರುದ್ಧ ಕ್ರಮ ಕೈಗೊಂಡು ಅದರ ವಿವರಗಳನ್ನು ಸಲ್ಲಿಸಬೇಕು ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು. ಇದೇ ವೇಳೆ ಶಬ್ದ ಮಾಲಿನ್ಯ ಮಾಪಕಗಳನ್ನು ಖರೀದಿಸದ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ನಿಶ್ಯಬ್ದ ವಲಯ ಘೋಷಣೆ: ಹೈಕೋರ್ಟ್‌ನ ಹಿಂದಿನ ಆದೇಶದಂತೆ ರಾಜ್ಯದಲ್ಲಿ ನಿಶ್ಯಬ್ದ ವಲಯಗಳನ್ನು ಘೋಷಣೆ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸರ್ಕಾರದ ಪರ ವಕೀಲರಾದ ವೈ. ಎಚ್. ವಿಜಯ್ ಕುಮಾರ್ ನ್ಯಾಯಪೀಠಕ್ಕೆ ತಿಳಿಸಿದರು. ಅದಕ್ಕೆ ನ್ಯಾಯಪೀಠ, ಹಾಗಿದ್ದರೆ ಅಧಿಸೂಚನೆ ಪ್ರತಿ ಹಾಗೂ ಪೂರ್ಣ ವಿವರಗಳನ್ನು ನೀಡಿ ಎಂದು ಸೂಚಿಸಿತು.