ಬೆಂಗಳೂರು: ನಗರದ ಟಿ.ಕೆ.ದೀಪಕ್ ಬಡಾವಣೆಯನ್ನು ಜೆ.ಪಿ.ನಗರ 8ನೇ ಹಂತದ ಬಡಾವಣೆಯಲ್ಲಿ ವಿಲೀನಗೊಳಿಸಿ 2011ರಲ್ಲಿ ಬಿಡಿಎ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ಹೈಕೋರ್ಟ್ ಸೋಮವಾರ ಬಿಡಿಎಗೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತಂತೆ ಎನ್.ಷಡಕ್ಷರಿ ಸ್ವಾಮಿ ಸೇರಿದಂತೆ 22 ನಿವೇಶನಗಳ ಮಾಲೀಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್. ಸುಜಾತಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬಿಡಿಎಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಬಿಡಿಎ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಉತ್ತರಹಳ್ಳಿ ಹೋಬಳಿಯ ಕೊತ್ತನೂರು ಗ್ರಾಮದಲ್ಲಿ ಸರ್ವೇ ನಂಬರ್ 34/1, 39/1 ಮತ್ತು 40/1 ಗಳಲ್ಲಿ 11 ಎಕರೆ 13 ಗುಂಟೆ ಭೂಮಿಯನ್ನು ಟಿ.ಕೆ.ದೀಪಕ್ ಎನ್ನುವವರು ಹೊಂದಿದ್ದರು. 1995ರಲ್ಲಿ ದೀಪಕ್ ಅವರು ಬಿಡಿಎ ಅನುಮೋದನೆ ಪಡೆದು ಟಿ.ಕೆ.ದೀಪಕ್ ಲೇಔಟ್ ನಿರ್ಮಾಣ ಮಾಡಿ, ಭೂ ಪರಿವರ್ತನೆ ಮಾಡಿಸಿಕೊಂಡು ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಿದ್ದರು.
ಅದರಂತೆ, 2007ರಲ್ಲಿ ಆ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು. ಬಡಾವಣೆ ಅಭಿವೃದ್ಧಿಗೊಂಡು ಹಲವರು ಮನೆಗಳನ್ನು ನಿರ್ಮಿಸಿಕೊಂಡು ಅಲ್ಲೇ ವಾಸ ಮಾಡುತ್ತಿದ್ದಾರೆ. ಆದರೆ ಬಿಡಿಎ 2011ರಲ್ಲಿ ಜೆ.ಪಿ.ನಗರ 8ನೇ ಹಂತದ ಬಡಾವಣೆ ಅಭಿವೃದ್ಧಿಗೊಳಿಸುವುದಾಗಿ ಅಧಿಸೂಚನೆ ಹೊರಡಿಸಿತ್ತು.
ಆಗ, ಅದರಲ್ಲಿ ಟಿ.ಕೆ.ದೀಪಕ್ ಬಡಾವಣೆಯನ್ನೂ ಸೇರಿಸಿದೆ. ಹಾಗಾಗಿ ಮನೆಗಳ ನಂಬರ್ ಬದಲಾವಣೆಯಾಗುತ್ತಿದೆ. ಜೊತೆಗೆ ಮೊದಲಿದ್ದ ಸಿಎ ನಿವೇಶನಗಳನ್ನೂ ಸಹ ನಿವೇಶನಗಳನ್ನಾಗಿ ಪರಿವರ್ತಿಸಿ ಹಂಚಿಕೆ ಮಾಡಲಾಗುತ್ತಿದೆ. ಆದ್ದರಿಂದ ಬಿಡಿಎ ಅಧಿಸೂಚನೆ ರದ್ದುಗೊಳಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.